ಮುಸ್ಲಿಮರು, ಯಾದವರು ನನಗೆ ಮತ ಚಲಾಯಿಸಿಲ್ಲ, ನಾನು ಅವರಿಗೆ ಸಹಾಯ ಮಾಡುವುದಿಲ್ಲ: ಜೆಡಿಯು ಸಂಸದ ದೇವೇಶ್ ಚಂದ್ರ ಠಾಕೂರ್

ದೇವೇಶ್ ಚಂದ್ರ ಠಾಕೂರ್ (Photo:X/@deveshMLCbihar)
ಪಾಟ್ನಾ: ಸೀತಾಮಾರ್ಹಿ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರು ಹಾಗೂ ಯಾದವರು ನನಗೆ ಮತ ಚಲಾಯಿಸಿಲ್ಲ, ನಾನು ಅವರ ನೆರವಿಗಾಗಿನ ಮನವಿಗೆ ಸ್ಪಂದಿಸುವುದಿಲ್ಲ ಎಂದು ಹೇಳುವ ಮೂಲಕ ಜೆಡಿಯು ಸಂಸದ ದೇವೇಶ್ ಚಂದ್ರ ಠಾಕೂರ್ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ನಾನು ಈ ಎರಡು ಸಮುದಾಯಗಳಿಗೂ ಯಾವಾಗಲೂ ನೆರವು ನೀಡಿದ್ದೆ. ಆದರೆ, ಚುನಾವಣೆಯಲ್ಲಿ ಮತದಾನದ ವಿಷಯಕ್ಕೆ ಬಂದಾಗ, ನನ್ನ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಹೊಂದಿರುವುದರಿಂದ ಈ ಎರಡು ಸಮುದಾಯಗಳು ನನಗೆ ಮತ ಚಲಾಯಿಸಿಲ್ಲ ಎಂದು ದೇವೇಶ್ ಚಂದ್ರ ಠಾಕೂರ್ ಹೇಳಿದ್ದಾರೆ. ಅವರು ಸೀತಾಮಾರ್ಹಿ ಲೋಕಸಭಾ ಕ್ಷೇತ್ರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿಯಾದ ಆರ್ಜೆಡಿ ಅಭ್ಯರ್ಥಿ ಅರ್ಜುನ್ ರಾಯ್ ವಿರುದ್ಧ ಸುಮಾರು 50,000ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ದೇವೇಶ್ ಚಂದ್ರ ಠಾಕೂರ್ ಹೇಳಿಕೆಗೆ ತಿರುಗೇಟು ನೀಡಿರುವ ಆರ್ಜೆಡಿ, ಠಾಕೂರ್ ಅವರ ವ್ಯಕ್ತಿತ್ವಕ್ಕೆ ಈ ಹೇಳಿಕೆ ಹೊಂದುವುದಿಲ್ಲ ಎಂದು ಟೀಕಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆರ್ಜೆಡಿ ವಕ್ತಾರ ರಿಷಿ ಮಿಶ್ರಾ, “ಅವರು ಇಂತಹ ಹೇಳಿಕೆಯನ್ನು ನೀಡಬಾರದಿತ್ತು. ಚುನಾವಣೆ ಮುಗಿದ ನಂತರ ಅವರು ಕ್ಷೇತ್ರದ ಸಂಸದರು. ಅವರು ಯಾವುದೇ ಜಾತಿ ಅಥವಾ ಜನಾಂಗದಿಂದ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳಬಾರದು” ಎಂದು ಎಚ್ಚರಿಸಿದ್ದಾರೆ.
ಇದು ಕಳವಳಕಾರಿ ಹೇಳಿಕೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಸುಧೀರ್ ಕೌಂಡಿಲ್ಯ ಆತಂಕ ವ್ಯಕ್ತಪಡಿಸಿದ್ದಾರೆ.







