"ನಾವು ಯಾರನ್ನು ಶಿಕ್ಷಿಸುತ್ತಿದ್ದೇವೆ": ಮುಸ್ತಫಿಝುರ್ ರೆಹ್ಮಾನ್ರನ್ನು ಕೈಬಿಟ್ಟಿದ್ದಕ್ಕೆ ಶಶಿ ತರೂರ್ ಪ್ರತಿಕ್ರಿಯೆ

ಮುಸ್ತಾಫಿಝುರ್ ರೆಹಮಾನ್ , ಶಶಿ ತರೂರ್| Photo Credit : PTI
ಹೊಸದಿಲ್ಲಿ, ಜ.3: ‘‘ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗೆ ಕ್ರಿಕೆಟನ್ನು ಎಳೆದು ತರಬಾರದು’’ ಎಂದು ಬಿಸಿಸಿಐ ಸೂಚನೆಯ ನಂತರ ಬಾಂಗ್ಲಾದೇಶದ ವೇಗಿ ಮುಸ್ತಫಿಝುರ್ರಹ್ಮಾನ್ರನ್ನು ಐಪಿಎಲ್ ತಂಡದಿಂದ ಕೆಕೆಆರ್ ಬಿಡುಗಡೆ ಮಾಡಿರುವ ನಿರ್ಧಾರಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ.
ಶನಿವಾರ ವೀಡಿಯೊವನ್ನು ಹಂಚಿಕೊಂಡಿರುವ ತರೂರ್ ಈ ವಿಷಯದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
‘ಬಿಸಿಸಿಐ, ಮುಸ್ತಫಿಝುರ್ರಹ್ಮಾನ್ರನ್ನು ಶೋಚನೀಯವಾಗಿ ತಂಡದಿಂದ ಹೊರಗಟ್ಟಿದೆ. ಬಾಂಗ್ಲಾದೇಶದ ಆಟಗಾರರಾದ ಲಿಟನ್ ದಾಸ್ ಹಾಗೂ ಸೌಮ್ಯ ಸರ್ಕಾರ್ ಆಗಿದ್ದರೆ ಏನು ಮಾಡುತ್ತಿದ್ದರು. ಒಂದು ರಾಷ್ಟ್ರ, ಒಬ್ಬ ವ್ಯಕ್ತಿ, ಆತನ ಧರ್ಮ?ಇಲ್ಲಿ ನಾವು ಯಾರನ್ನು ಶಿಕ್ಷಿಸುತ್ತಿದ್ದೇವೆ? ಕ್ರೀಡೆಯ ಈ ಅರ್ಥಹೀನ ರಾಜಕೀಯ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತಿದೆ? ಎಂದು ಬಿಸಿಸಿಐ ನಿರ್ಧಾರದ ವ್ಯಾಪಕ ಪರಿಣಾಮಗಳ ಕುರಿತು ತರೂರ್ ತೀಕ್ಷ್ಣವಾಗಿ ಪ್ರಶ್ನಿಸಿದರು.
ಬಿಸಿಸಿಐ ಸೂಚನೆಯು ಮೇರೆಗೆ ಮುಂಬರುವ ಐಪಿಎಲ್ ಋತುವಿನಿಂದ ಮುಸ್ತಫಿಝುರ್ರಹ್ಮಾನ್ರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಕೆಕೆಆರ್ ದೃಢಪಡಿಸಿದ ನಂತರ ತರೂರ್ರಿಂದ ಈ ಹೇಳಿಕೆ ಬಂದಿದೆ.





