ನನ್ನ ತಾಯಿ ವಾರ್ನರ್ ರನ್ನು ಸೈತಾನ್ ಎಂದು ಕರೆಯುತ್ತಿದ್ದರು : ಉಸ್ಮಾನ್ ಖ್ವಾಜಾ
“ವಾರ್ನರ್ ನನ್ನ ತಾಯಿಯ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ”
ಡೇವಿಡ್ ವಾರ್ನರ್ | Photo: X
ಮೆಲ್ಬರ್ನ್: ಆಸ್ಟ್ರೇಲಿಯದ ಆಕ್ರಮಣಕಾರಿ ಶೈಲಿಯ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಶನಿವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ(ಎಸ್ಸಿಜಿ) ಪಾಕಿಸ್ತಾನದ ವಿರುದ್ಧ ತನ್ನ ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು. ತನ್ನ ಭಾವನಾತ್ಮಕ ವಿದಾಯದ ಪಂದ್ಯದಲ್ಲಿ ವಾರ್ನರ್ 34 ಹಾಗೂ 57 ರನ್ ಗಳಿಸಿದರು. ಈ ಮೂಲಕ ಆಸ್ಟ್ರೇಲಿಯವು 3ನೇ ಟೆಸ್ಟ್ ಪಂದ್ಯವನ್ನು 8 ವಿಕೆಟ್ ಗಳಿಂದ ಜಯ ಸಾಧಿಸಿ ಸರಣಿಯನ್ನು 3-0 ಅಂತರದಿಂದ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.
ವಾರ್ನರ್ ವಿದಾಯದ ಟೆಸ್ಟ್ ಆಡಿದ ನಂತರ ಎಸ್ಸಿಜಿ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಎದ್ದುನಿಂತು ಗೌರವಿಸಿದರು. ತನ್ನ ದೀರ್ಘಕಾಲದ ತಂಡದ ಸಹ ಆಟಗಾರ ಉಸ್ಮಾನ್ ಖ್ವಾಜಾ ಅವರನ್ನು ಆಲಿಂಗಿಸಿಕೊಂಡಿರುವುದು ಕಂಡುಬಂತು.
ಈ ಭಾವನಾತ್ಮಕ ಕ್ಷಣದ ಕುರಿತು ಮಾತನಾಡಿದ ಖ್ವಾಜಾ, ವಾರ್ನರ್ ಹಾಗೂ ತನ್ನ ತಾಯಿಯ ನಡುವಿನ ಬಾಂಧವ್ಯವನ್ನು ನೆನಪಿಸಿಕೊಂಡರು.
ವಾರ್ನರ್ ನನ್ನ ತಾಯಿಯ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ. ನನ್ನ ತಾಯಿ ಆತನನ್ನು ಸೈತಾನ್(ದೆವ್ವ)ಎಂಬ ಅಡ್ಡ ಹೆಸರಿನಿಂದ ತಮಾಷೆಯಾಗಿ ಕರೆಯುತ್ತಿದ್ದರು ಎಂದು ಖ್ವಾಜಾ ಉಲ್ಲೇಖಿಸಿದ್ದಾರೆ.
ವಾರ್ನರ್ ನನ್ನ ತಾಯಿಯನ್ನು ನನ್ನಷ್ಟೇ ಬಲ್ಲವನಾಗಿದ್ದೇನೆ. ನನ್ನ ತಾಯಿಗೆ ಆತನೆಂದರೆ ಇಷ್ಟ. ಆತನನ್ನು ನನ್ನ ತಾಯಿ ದೆವ್ವ ಎಂದು ಕರೆಯುತ್ತಿದ್ದರು ಎಂದು ಖ್ವಾಜಾ ಫಾಕ್ಸ್ ಕ್ರಿಕೆಟ್ ಗೆ ತಿಳಿಸಿದ್ದಾರೆ.
ಪ್ರಾಮಾಣಿಕವಾಗಿ ನಾನು ವಾರ್ನರ್ರೊಂದಿಗೆ ಬ್ಯಾಟಿಂಗ್ ಮಾಡಿ ಆನಂದಿಸಿದ್ದೇನೆ. ಅವರು ಚೆಂಡಿನ ಮೇಲೆ ದಾಳಿ ಮಾಡುತ್ತಿದ್ದರು. ನನಗೆ ಆಡಲು ಅವಕಾಶವನ್ನು ನೀಡುತ್ತಿದ್ದರು. ನನ್ನ ವೃತ್ತಿಜೀವನವನ್ನು ಕೊನೆಗೊಳಿಸಿದ ನಂತರ ಅವರೊಂದಿಗೆ ಗಾಲ್ಫ್ ಆಡಿ ಆನಂದಿಸುವೆ ಎಂದರು.
2011ರಲ್ಲಿ ಬ್ರಿಸ್ಬೇನ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆಗೈದಿದ್ದ ವಾರ್ನರ್ 44.59ರ ಸರಾಸರಿಯಲ್ಲಿ 112 ಟೆಸ್ಟ್ ಪಂದ್ಯಗಳಲ್ಲಿ 8,786 ರನ್ ಗಳಿಸಿದ್ದಾರೆ. ರೆಡ್ ಬಾಲ್ ಕ್ರಿಕೆಟ್ ನಲ್ಲಿ 26 ಶತಕ ಹಾಗೂ 37 ಅರ್ಧಶತಕಗಳನ್ನು ಗಳಿಸಿದ್ದಾರೆ.