ಮಿಜೋರಾಂ ವಿಮಾನ ನಿಲ್ದಾಣದಲ್ಲಿ ಸ್ಕಿಡ್ ಆದ ಮ್ಯಾನ್ಮಾರ್ ಮಿಲಿಟರಿ ವಿಮಾನ

Photo: NDTV
ಐಝ್ವಾಲ್: ಮಿಜೋರಾಂನ ಲೆಂಗ್ಪುಯಿ ವಿಮಾನ ನಿಲ್ದಾಣದಲ್ಲಿ ಇಂದು ಮ್ಯಾನ್ಮಾರ್ನ ಮಿಲಿಟರಿ ವಿಮಾನವೊಂದು ಸ್ಕಿಡ್ ಆದ ಘಟನೆ ನಡೆದಿದೆ. ಮ್ಯಾನ್ಮಾರ್ನಲ್ಲಿ ಬಂಡುಕೋರರು ಹಾಗೂ ಅಲ್ಲಿನ ಜುಂಟಾ ಸರ್ಕಾರದ ನಡುವಿನ ಸಂಘರ್ಷಗಳ ಕಾರಣ ಪಲಾಯನಗೈದು ಮಿಜೋರಾಂನಲ್ಲಿ ರಕ್ಷಣೆ ಪಡೆದಿದ್ದ ಆ ದೇಶದ ಸೇನಾ ಸಿಬ್ಬಂದಿಗಳನ್ನು ಕರೆದೊಯ್ಯಲೆಂದು ಈ ಮಿಲಿಟರಿ ವಿಮಾನ ಬಂದಿತ್ತು.
ಭೂಸ್ಪರ್ಶದ ವೇಳೆ ಮ್ಯಾನ್ಮಾರ್ನ ವಿಮಾನವು ಈ ಟೇಬಲ್ ಟಾಪ್ ವಿಮಾನ ನಿಲ್ದಾಣದ ರನ್-ವೇಯಲ್ಲಿ ಸ್ಕಿಡ್ ಆಯಿತು.
ಸೋಮವಾರ ಕನಿಷ್ಠ 184 ಮ್ಯಾನ್ಮಾರ್ ಸೈನಿಕರನ್ನು ವಾಪಸ್ ಕರೆದೊಯ್ಯಲಾಗಿದ್ದು ಉಳಿದವರನ್ನು ಇಂದು ವಾಪಸ್ ಕಳುಹಿಸಲಾಗುತ್ತಿದೆ. ಕಳೆದ ವಾರ ಮ್ಯಾನ್ಮಾರ್ನಿಂದ ಕನಿಷ್ಠ 276 ಸೇನಾ ಸಿಬ್ಬಂದಿ ಮಿಜೋರಾಂ ಪ್ರವೇಶಿಸಿದ್ದರು.
ಮ್ಯಾನ್ಮಾರ್ನ ನುಸುಳುಕೋರ ಗುಂಪಾದ ಅರಕನ್ ಸೇನೆಯ ಸಿಬ್ಬಂದಿ ಮಿಲಿಟರಿ ಸಿಬ್ಬಂದಿಯ ಶಿಬಿರವನ್ನು ವಶಪಡಿಸಿಕೊಂಡ ನಂತರ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದರು.
ಅವರನ್ನೆಲ್ಲಾ ವಾಪಸ್ ಕರೆದೊಯ್ಯಲು ಮ್ಯಾನ್ಮಾರ್ ವಾಯುಪಡೆಯ ವಿಮಾನಗಳನ್ನು ಬಳಸಲಾಗಿದೆ.





