ಜಮ್ಮುವಿನಲ್ಲಿ 17 ಮಂದಿ ನಿಗೂಢ ಸಾವು ಪ್ರಕರಣ: ಕೀಟನಾಶಕ ಮಳಿಗೆಗಳಿಗೆ ಬೀಗ

Photo credit: PTI
ರಜೌರಿ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಯಾದ ರಜೌರಿಯಲ್ಲಿನ ಬಧಾಲ್ ಗ್ರಾಮದಲ್ಲಿ ಸಂಭವಿಸಿರುವ 17 ಮಂದಿಯ ಸಾವಿನ ನಿಗೂಢತೆ ಇನ್ನೂ ಮುಂದುವರಿದಿದ್ದು, ಈ ಕುರಿತು ಈವರೆಗೆ ಯಾವುದೇ ಸುಳಿವು ದೊರೆತಿಲ್ಲ. ತನಿಖೆಯ ಭಾಗವಾಗಿ ಜಿಲ್ಲೆಯಲ್ಲಿರುವ ಕೀಟನಾಶಕ ಮಳಿಗೆಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಮುಂದಿನ ಆದೇಶದವರೆಗೆ ಮಳಿಗೆಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ.
ನಿಗೂಢ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ 11 ಮಂದಿ ಚೇತರಿಸಿಕೊಂಡಿದ್ದು, ಅವರನ್ನೆಲ್ಲ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಈ ನಡುವೆ, ಸುಮಾರು 250 ಕೀಟನಾಶಕ ಹಾಗೂ ರಸಗೊಬ್ಬರ ಅಂಗಡಿಗಳನ್ನು ಮುಚ್ಚಿಸಿರುವ ಅಧಿಕಾರಿಗಳು, ಇನ್ನೂ ಎರಡು ದಿನಗಳ ಕಾಲ ಶೋಧ ಕಾರ್ಯ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಬಧಾಲ್ ಗ್ರಾಮವನ್ನು ಇನ್ನೂ ನಿರ್ಬಂಧಿತ ವಲಯದಲ್ಲೇ ಇರಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ 79 ಕುಟುಂಬಗಳನ್ನು ಪ್ರತ್ಯೇಕ ವಾಸದಲ್ಲಿರಿಸಲಾಗಿದೆ.
Next Story





