ಆಂಧ್ರಪ್ರದೇಶ | ನಿಗೂಢ ಕಾಯಿಲೆಗೆ 20 ಮಂದಿ ಮೃತ್ಯು : ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ

ಸಾಂದರ್ಭಿಕ ಚಿತ್ರ (PTI)
ವಿಜಯವಾಡ: ಕಳೆದ ಎರಡು ತಿಂಗಳಿಂದ ನಿಗೂಢ ಕಾಯಿಲೆಗೆ ಸುಮಾರು 20 ಮಂದಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತುರಕಪಲೆಂ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿಯನ್ನು ಘೋಷಿಸಲಾಗಿದೆ.
ಈ ಕುರಿತು ಮಾಹಿತಿ ತಿಳಿದು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಗುಂಟೂರು ಜಿಲ್ಲೆಯ ತುರಕಪಲೆಂ ಗ್ರಾಮದಲ್ಲಿ ಸಂಭವಿಸುತ್ತಿರುವ ಸಾವುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು ಹಾಗೂ ಗ್ರಾಮದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.
ಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಬೇಕು. ಶನಿವಾರ ಮತ್ತು ರವಿವಾರ ಆರೋಗ್ಯ ಶಿಬಿರಗಳನ್ನು ನಡೆಸಬೇಕು. ಪ್ರತಿಯೊಬ್ಬರಿಗೂ ವೈದ್ಯಕೀಯ ಪರೀಕ್ಷೆ ನಡೆಸಬೇಕು ಎಂದು ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅಧಿಕಾರಿಗಳ ಜೊತೆಗಿನ ಪರಾಮರ್ಶನಾ ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
“ಶಂಕಿತ ಬ್ಯಾಕ್ಟೀಯಾ ಕಾಯಿಲೆಯು ಕುಡಿಯುವ ನೀರು, ಆಹಾರ ಪದಾರ್ಥಗಳು ಹಾಗೂ ಗಾಳಿಯ ಮೂಲಕ ಹರಡುವ ಸಂಭವ ಇರುವುದರಿಂದ, ಅಧಿಕಾರಿಗಳು ದಿನದ 24 ಗಂಟೆಯೂ ಜಾಗೃತರಾಗಿರಬೇಕು” ಎಂದು ಸೂಚಿಸಿದ್ದಾರೆ.
ಈ ನಡುವೆ, ತುರಕಪಲೆಂ ಗ್ರಾಮದಲ್ಲಿನ ಸಾವಿನ ಪ್ರಮಾಣ ದಿಢೀರ್ ಏರಿಕೆಯಾಗಿರುವ ಕುರಿತು ಉನ್ನತ ಪ್ರಾಧಿಕಾರಗಳಿಗೆ ಸಕಾಲದಲ್ಲಿ ಮಾಹಿತಿ ನೀಡುವಲ್ಲಿ ವಿಫಲವಾಗಿರುವ ಅಧಿಕಾರಿಗಳನ್ನು ಪತ್ತೆ ಹಚ್ಚಲು ರಾಜ್ಯ ಸರಕಾರ ದ್ವಿತೀಯ ಹಂತದ ಆರೋಗ್ಯ ನಿರ್ದೇಶಕಿ ಡಾ. ಸಿರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.







