ಜಮ್ಮು ಮತ್ತು ಕಾಶ್ಮೀರ | ರಜೌರಿಯಲ್ಲಿ ಮತ್ತೆ ಕಾಣಿಸಿಕೊಂಡ ನಿಗೂಢ ಕಾಯಿಲೆ: 35 ಮಂದಿ ಆಸ್ಪತ್ರೆಗೆ ದಾಖಲು

ಸಾಂದರ್ಭಿಕ ಚಿತ್ರ (credit: Grok)
ಶ್ರೀನಗರ: ರಾಜ್ಯದ ಗಡಿ ಜಿಲ್ಲೆಯಾದ ರಜೌರಿಯಲ್ಲಿ ದಿಢೀರನೆ ನಿಗೂಢ ಕಾಯಿಲೆಯೊಂದು ಕಾಣಿಸಿಕೊಂಡಿದ್ದು, ಇದರಿಂದ ಅಸ್ವಸ್ಥಗೊಂಡಿರುವ ಪಂಚಾಯತ್ ಬಾಗ್ಲಾ ಪ್ರದೇಶದ 35 ಮಂದಿ ಗ್ರಾಮಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಿಗೂಢ ಕಾಯಿಲೆಯಿಂದ ಗಡಿ ಜಿಲ್ಲೆಯಾದ್ಯಂತ ಜನರು ಆತಂಕಗೊಂಡಿದ್ದು, ಆರೋಗ್ಯ ಪ್ರಾಧಿಕಾರಗಳು ಕ್ಷಿಪ್ರ ಕ್ರಮಕ್ಕೆ ಮುಂದಾಗಿವೆ.
“ಕಳೆದ ಕೆಲ ದಿನಗಳಲ್ಲಿ ಅಸ್ವಸ್ಥರಾಗಿರುವ 35 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರ ಆರೋಗ್ಯ ಸ್ಥಿತಿಯೂ ಸ್ಥಿರವಾಗಿದೆ. ಈ ಪೈಕಿ ನಾಲ್ವರು ರೋಗಿಗಳನ್ನು ರಜೌರಿಯಲ್ಲಿನ ಸರಕಾರಿ ವೈದ್ಯಕೀಯ ಕಾಲೇಜಿಗೆ ಶಿಫಾರಸು ಮಾಡಲಾಗಿದೆ” ಎಂದು ವೈದ್ಯಕೀಯ ತಂಡದ ನೇತೃತ್ವ ವಹಿಸಿರುವ ವೈದ್ಯರೊಬ್ಬರು ಗ್ರಾಮದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಡಿಸೆಂಬರ್ 7, 2024ರಿಂದ ಜನವರಿ 19, 2025ರ ನಡುವೆ ರಜೌರಿ ಜಿಲ್ಲೆಯ ಬಢಾಲ್ ಗ್ರಾಮದಲ್ಲಿ ಇದೇ ಬಗೆಯ ನಿಗೂಢ ಕಾಯಿಲೆಯೊಂದು ಕಾಣಿಸಿಕೊಂಡು, ಮೂರು ಕುಟುಂಬಗಳ 13 ಮಕ್ಕಳು ಸೇರಿದಂತೆ 17 ಮಂದಿ ನಿಗೂಢವಾಗಿ ಮೃತಪಟ್ಟಿದ್ದರು. ಇದರ ಬೆನ್ನಿಗೇ, ಕಿಲಾ ದರ್ಹಲ್ ಬ್ಲಾಕ್ ನ ಕೋಟ್ಲಿ ಬಾಗ್ಲಾ ವಾರ್ಡ್ ನಲ್ಲಿ ಕಾಣಿಸಿಕೊಂಡಿರುವ ಈ ನಿಗೂಢ ಕಾಯಿಲೆಯು ಅಧಿಕಾರಿಗಳು ಮತ್ತೊಮ್ಮೆ ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
ಏಮ್ಸ್, ಹೊಸದಿಲ್ಲಿ ಮತ್ತು ಚಂಡೀಗಢದ ಪಿಜಿಐಎಂಇಆರ್ ಆಸ್ಪತ್ರೆಗಳ ತಜ್ಞ ವೈದ್ಯರಿಂದ ವ್ಯಾಪಕ ಪ್ರಮಾಣದ ಪರೀಕ್ಷೆ ಹಾಗೂ ತನಿಖೆಗಳನ್ನು ನಡೆಸಿದ ಹೊರತಾಗಿಯೂ, ನಿಗೂಢ ಕಾಯಿಲೆಯೊಂದರಿಂದ ಈ ಹಿಂದೆ ಸಂಭವಿಸಿದ್ದ ಸಾವುಗಳ ನಿಖರ ಕಾರಣಗಳನ್ನು ಪತ್ತೆ ಹಚ್ಚಲು ಪ್ರಾಧಿಕಾರಗಳಿಗೆ ಇದುವರೆಗೂ ಸಾಧ್ಯವಾಗಿಲ್ಲ.
ಈ ವೇಳೆ, ಇಡೀ ಗ್ರಾಮವನ್ನು ನಿರ್ಬಂಧಿತ ವಲಯವೆಂದು ಘೋಷಿಸಿದ್ದ ಪ್ರಾಧಿಕಾರಗಳು, ಗ್ರಾಮದ ನಿವಾಸಿಗಳನ್ನು ಪ್ರತ್ಯೇಕ ವಾಸದ ಕೇಂದ್ರಗಳಿಗೆ ಸ್ಥಳಾಂತರಿಸಿದ್ದರು. ಬಳಿಕ, ಒಂದು ತಿಂಗಳ ಸುದೀರ್ಘಾವಧಿಯ ನಂತರ, ಅವರನ್ನೆಲ್ಲ ಅಲ್ಲಿಂದ ಬಿಡುಗಡೆಗೊಳಿಸಲಾಗಿತ್ತು.