ಚಾಕೊಲೇಟ್ ಸೇವಿಸಿ ಅಸ್ವಸ್ಥಗೊಂಡಿದ್ದ ಬಾಲಕನ ಸುತ್ತ ಅನುಮಾನದ ಹುತ್ತ!
ಮೂತ್ರಪರೀಕ್ಷೆಯಲ್ಲಿ ಖಿನ್ನತೆಯುಂಟು ಮಾಡುವ ರಾಸಾಯನಿಕ ಪತ್ತೆ

Photo : PTI
ಕೊಟ್ಟಾಯಂ: ಕಳೆದ ತಿಂಗಳು ಶಾಲೆಯಲ್ಲಿ ಚಾಕೊಲೇಟ್ ಸೇವಿಸಿ, ನಂತರ ಅಸ್ವಸ್ಥತೆಯ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ನಾಲ್ಕು ವರ್ಷದ ಬಾಲಕನ ಮೂತ್ರದಲ್ಲಿ ಬೆಂಝೊಡಯಝೆಪೈನ್ಸ್ ಎಂಬ ಖಿನ್ನತೆಯನ್ನುಂಟು ಮಾಡುವ ರಾಸಾಯನಿಕ ಪತ್ತೆಯಾಗಿದ್ದು, ಆತನ ಅಸ್ವಸ್ಥತೆ ಕುರಿತು ಹಲವು ಅನುಮಾನಗಳು ಸೃಷ್ಟಿಯಾಗಿವೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 17ರಂದು ಶಾಲೆಯಿಂದ ಮರಳಿದ ನಂತರ ಬಾಲಕನು ತೂಕಡಿಕೆಗೆ ಒಳಗಾಗಿದ್ದ. ಈ ಕುರಿತು ಬಾಲಕನ ತಾಯಿಯು ವಿಚಾರಿಸಿದಾಗ, ಆತ ಶಾಲೆಯಲ್ಲಿ ಚಾಕೊಲೇಟ್ ಸೇವಿಸಿದ್ದ ಎಂದು ಶಾಲೆಯ ಶಿಕ್ಷಕರು ಮಾಹಿತಿ ನೀಡಿದ್ದಾರೆ. ತಕ್ಷಣವೇ ಬಾಲಕನನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದ್ದು, ನಂತರ, ಆತನನ್ನು ಎರ್ನಾಕುಲಂನ ಅಮೃತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಬಾಲಕನ ಮೂತ್ರವನ್ನು ಪರೀಕ್ಷೆಗೊಳಪಡಿಸಿದಾಗ, ಖಿನ್ನತೆಯನ್ನುಂಟು ಮಾಡುವ ರಾಸಾಯನಿಕವಿರುವುದು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.
“ಆತ ಎಲ್ಲಿ ಚಾಕೊಲೇಟ್ ಖರೀದಿಸಿದ ಅಥವಾ ಆತನ ದೇಹದೊಳಗೆ ಹೇಗೆ ಬೆಂಝೋಡಯಝೆಪೈನ್ಸ್ ರಾಸಾಯನಿಕ ಪ್ರವೇಶಿಸಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ” ಎಂದು ಅವರು ತಿಳಿಸಿದ್ದಾರೆ.
ಆದರೆ, ಈ ಸಂಬಂಧ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಪ್ರಯೋಗಾಲಯ ತಂತ್ರಜ್ಞೆಯಾಗಿರುವ ಬಾಲಕನ ತಾಯಿಯು, ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಘಟನೆಯ ಸಂಬಂಧ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿರುವ ಆಕೆ, ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ನನಗೆ ನನ್ನ ತಾಯಿ ಚಾಕೊಲೇಟ್ ನೀಡಿದಳು ಎಂದು ಬಾಲಕನು ಆರಂಭಿಕ ಹೇಳಿಕೆ ನೀಡಿದ್ದಾನಾದರೂ, ಆತನ ಹೇಳಿಕೆಯನ್ನು ಆಕೆ ನಿರಾಕರಿಸಿದ್ದಾರೆ.







