ನಾಗಾಲ್ಯಾಂಡ್ ರಾಜ್ಯಪಾಲ ಲಾ ಗಣೇಶನ್ ನಿಧನ

ಲಾ. ಗಣೇಶನ್ | Credit: X/@narendramodi
ಕೊಹಿಮಾ: ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಗಾಲ್ಯಾಂಡ್ ರಾಜ್ಯಪಾಲ ಲಾ. ಗಣೇಶನ್ ಶುಕ್ರವಾರ ನಿಧನರಾದರು ಎಂದು ರಾಜಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಲಾ. ಗಣೇಶನ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮಣಿಪುರ ಮಾಜಿ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಮತ್ತಿತರ ನಾಯಕರು ಕಂಬನಿ ಮಿಡಿದಿದ್ದಾರೆ.
ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಗಣೇಶನ್, ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ ಎಂದು ಕೊಹಿಮಾ ರಾಜಭವನದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಆಗಸ್ಟ್ 8ರಂದು ಚೆನ್ನೈನ ತಮ್ಮ ನಿವಾಸದಲ್ಲಿ ಕುಸಿದು ಬಿದ್ದಿದ್ದ ಗಣೇಶನ್ ಅವರ ತಲೆಗೆ ಗಾಯವಾಗಿತ್ತು ಎಂದು ಮೂಲಗಳು ತಿಳಿಸಿವೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿತ್ತು. ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿಕೊಂಡಿದ್ದ ವೈದ್ಯರು, ಅವರ ಮೇಲೆ ತೀವ್ರ ಆರೋಗ್ಯ ನಿಗಾ ವಹಿಸಿದ್ದರು ಹಾಗೂ ಚಿಕಿತ್ಸೆ ನೀಡುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಲಾ. ಗಣೇಶನ್ ನಿಧನಕ್ಕೆ ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ, “ನಾಗಾಲ್ಯಾಂಡ್ ರಾಜ್ಯಪಾಲರಾದ ಶ್ರೀ ಲಾ. ಗಣೇಶನ್ ನಿಧನದ ಸುದ್ದಿ ತಿಳಿದು ತೀವ್ರ ದುಖವಾಗಿದೆ. ಅವರನ್ನು ಸಮರ್ಪಣಾ ಭಾವದ ರಾಷ್ಟ್ರೀಯವಾದಿ ಎಂದು ಸದಾಕಾಲ ಸ್ಮರಿಸಲಾಗುತ್ತದೆ” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗಣೇಶನ್ ಅವರನ್ನು ಫೆಬ್ರವರಿ 12, 2023ರಂದು ನಾಗಾಲ್ಯಾಂಡ್ ನ 21ನೇ ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು. ಇದಕ್ಕೂ ಮುನ್ನ ಅವರು ಆಗಸ್ಟ್ 27, 2021ರಿಂದ ಫೆಬ್ರವರಿ 19, 2023ರವರೆಗೆ ಮಣಿಪುರದ 15ನೇ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು.







