ವಿಮಾನಗಳಿಗೆ ಸರಣಿ ಬಾಂಬ್ ಬೆದರಿಕೆಯ ಹಿಂದೆ ಭಯೋತ್ಪಾದನೆ ಕುರಿತ ಪುಸ್ತಕದ ಲೇಖಕ ಜಗದೀಶ್ ಉಯ್ಕೆ!

Photo : PTI
ಹೊಸದಿಲ್ಲಿ : ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆಗಳಿಗೆ ಸಂಬಂಧಿಸಿ ಮಹಾರಾಷ್ಟ್ರದ ನಾಗ್ಪುರದ ಪೊಲೀಸರು ರಾಜ್ಯದ ಗೊಂಡಿಯಾ ಮೂಲದ ಜಗದೀಶ್ ಉಯ್ಕೆ(35) ಎಂಬಾತ ಇರುವುದನ್ನು ಗುರುತಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಗ್ಪುರ ನಗರ ಪೊಲೀಸ್ ವಿಶೇಷ ಘಟಕವು ಜಗದೀಶ್ ಉಯ್ಕೆ ಎಂಬ ಆರೋಪಿಯನ್ನು ಗುರುತಿಸಿದ್ದು, ಈತ ಭಯೋತ್ಪಾದನೆ ಕುರಿತು ಪುಸ್ತಕ ಬರೆದಿದ್ದಾನೆ. ಈತನನ್ನು 2021ರಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು.
ಜಗದೀಶ್ ಉಯ್ಕೆ ಸಧ್ಯ ಪರಾರಿಯಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನಗಳಿಗೆ ಬಂದ ಬೆದರಿಕೆ ಈಮೇಲ್ ಮತ್ತು ಜಗದೀಶ್ ಉಯ್ಕೆಗೆ ಲಿಂಕ್ ಇರುವ ಬಗ್ಗೆ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಡಿಸಿಪಿ) ಶ್ವೇತಾ ಖೇಡ್ಕರ್ ನೇತೃತ್ವದ ತನಿಖಾ ತಂಡವು ಪತ್ತೆ ಹಚ್ಚಿದೆ.
ಪ್ರಧಾನ ಮಂತ್ರಿಗಳ ಕಚೇರಿ, ರೈಲ್ವೆ ಸಚಿವರು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಡಿಸಿಎಂಗಳಿಗೆ, ವಿಮಾನಯಾನ ಕಚೇರಿಗಳಿಗೆ, ಪೊಲೀಸ್ ಮಹಾನಿರ್ದೇಶಕರು (DGP) ಮತ್ತು ರೈಲ್ವೆ ರಕ್ಷಣಾ ಪಡೆ (RPF) ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಜಗದೀಶ್ ಉಯ್ಕೆ ಈಮೇಲ್ ಕಳುಹಿಸಿರುವುದು ಬಯಲಾಗಿದೆ.
ನಾಗ್ಪುರ ಪೊಲೀಸರು ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಜಗದೀಶ್ ಉಯ್ಕೆ ರಹಸ್ಯ ಭಯೋತ್ಪಾದನಾ ಕೋಡ್ ಬಗ್ಗೆ ತನ್ನ ಮಾಹಿತಿಯನ್ನು ಪ್ರಸ್ತುತಪಡಿಸಲು ಅವಕಾಶವನ್ನು ನೀಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆಯ ಈಮೇಲ್ ಕಳುಹಿಸಿದ್ದ. ಭಯೋತ್ಪಾದಕ ಬೆದರಿಕೆಗಳ ಬಗ್ಗೆ ತನಗಿರುವ ಮಾಹಿತಿ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಗೆ ಅವಕಾಶವನ್ನು ಕೂಡ ಆತ ಕೋರಿದ್ದ ಎಂದು ಹೇಳಲಾಗಿದೆ.
ಅಕ್ಟೋಬರ್ 21ರಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಜಗದೀಶ್ ಉಯ್ಕೆ ಈಮೇಲ್ ಕಳುಹಿಸಿದ್ದ ಅದೇ ಈಮೇಲ್ ಡಿಜಿಪಿ ಮತ್ತು ಆರ್ಪಿಎಫ್ ಗೆ ಕಳಹಿಸಿದ್ದಾನೆ. ಇದರಿಂದಾಗಿ ರೈಲ್ವೆ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಜಗದೀಶ್ ಉಯ್ಕೆ ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿಸಿದ ಅವರು ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಅಕ್ಟೋಬರ್ 26ರವರೆಗಿನ 13 ದಿನಗಳಲ್ಲಿ, ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸೇರಿದ 300ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಿದ್ದವು. ಸಾಮಾಜಿಕ ಮಾಧ್ಯಮಗಳ ಮೂಲಕ ಹೆಚ್ಚಿನ ಬೆದರಿಕೆಗಳನ್ನು ನೀಡಲಾಗಿತ್ತು.







