ನಾಗ್ಪುರ ಮನಪಾ ಚುನಾವಣೆ: ನಾಮಪತ್ರ ಹಿಂದೆಗೆದುಕೊಳ್ಳದಂತೆ ಪಕ್ಷದ ಅಭ್ಯರ್ಥಿಯನ್ನು ಕೋಣೆಯಲ್ಲಿ ಕೂಡಿ ಹಾಕಿದ ಬಿಜೆಪಿ ಕಾರ್ಯಕರ್ತರು

Photo Credit : indianexpress.com
ನಾಗ್ಪುರ (ಮಹಾರಾಷ್ಟ್ರ: ನಾಗ್ಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗೆ ನಾಮಪತ್ರ ಹಿಂದೆಗೆದುಕೊಳ್ಳುವಂತೆ ಬಿಜೆಪಿ ನಾಯಕತ್ವ ಸೂಚಿಸಿದ ಬಳಿಕ ಪಕ್ಷದ ಕುಪಿತ ಕಾರ್ಯಕರ್ತರು ಅಭ್ಯರ್ಥಿಯನ್ನು ಅವರ ಮನೆಯಲ್ಲಿಯ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು.
ವಾರ್ಡ್ ನಂ 13ರ ಪ್ರಭಾಗ್ ‘ಡಿ’ ಈ ನಾಟಕೀಯ ಘಟನೆಗೆ ಸಾಕ್ಷಿಯಾಗಿತ್ತು. ಬಿಜೆಪಿಯು ಕಿಶನ್ ಗಾವಂಡೆ ಮತ್ತು ವಿಜಯ ಹೋಳೆ ಎನ್ನುವವರಿಗೆ ಟಿಕೆಟ್ಗಳನ್ನು ನೀಡಿತ್ತು. ತನ್ನ ನಾಮಪತ್ರ ಹಿಂದೆಗೆದುಕೊಳ್ಳುವಂತೆ ಬಿಜೆಪಿ ಕೊನೆಯ ಕ್ಷಣದಲ್ಲಿ ಗಾವಂಡೆಗೆ ಸೂಚಿಸಿತ್ತು.
ಮನಪಾ ಚುನಾವಣೆಗಳು ಜ.15ರಂದು ನಡೆಯಲಿದ್ದು, ಶುಕ್ರವಾರ,ಜ.2 ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿತ್ತು.
ಸುದ್ದಿ ಹರಡುತ್ತಿದ್ದಂತೆ ಪ್ರತಿಭಟಿಸಿದ ಗಾವಂಡೆ ಬೆಂಬಲಿಗರು ಅವರು ತನ್ನ ನಾಮಪತ್ರವನ್ನು ಹಿಂದೆಗೆದುಕೊಳ್ಳದಂತೆ ಅವರನ್ನು ಮತ್ತು ಅವರ ಕುಟುಂಬ ಸದಸ್ಯರನ್ನು ಮನೆಯೊಳಗೆ ಕೂಡಿ ಹಾಕಿತ್ತು.
ಈ ಸಂದರ್ಭದಲ್ಲಿ ತನ್ನ ಬೆಂಬಲಿಗರಲ್ಲಿ ಭಾವನಾತ್ಮಕ ಮನವಿಯನ್ನು ಮಾಡಿಕೊಂಡಿದ್ದ ಗಾವಂಡೆ, ಅವರ ಭಾವನೆಗಳು ತನಗೆ ಅರ್ಥವಾಗಿದ್ದರೂ,ಪಕ್ಷದ ನಿರ್ದೇಶನ ಪಾಲಿಸುವುದು ತನ್ನ ಕರ್ತವ್ಯವಾಗಿದೆ. ಹೀಗಾಗಿ ತನ್ನನ್ನು ಮುಕ್ತಗೊಳಿಸುವಂತೆ ಕೋರಿಕೊಂಡಿದ್ದರು. ಆದರೆ ಇದಕ್ಕೆ ನಿರಾಕರಿಸಿದ್ದ ಕಾರ್ಯಕರ್ತರು ಬಿಜೆಪಿ ನಾಯಕತ್ವದ ವಿರುದ್ಧ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು.
ಸ್ಥಳಕ್ಕೆ ಧಾವಿಸಿದ ಬಿಜೆಪಿ ಎಂಎಲ್ಸಿ ಪರಿಣಯ ಫುಕೆ ಅವರು ಕಾರ್ಯಕರ್ತರೊಡನೆ ಚರ್ಚಿಸಿ,ಅವರನ್ನು ಸಮಾಧಾನಗೊಳಿಸಿದ ಬಳಿಕ ಮನೆಗೆ ಹಾಕಲಾಗಿದ್ದ ಬೀಗವನ್ನು ತೆರೆಯಲಾಗಿತ್ತು. ಇಷ್ಟಾದ ಬಳಿಕ ಗಾವಂಡೆ ತನ್ನ ನಾಮಪತ್ರವನ್ನು ಹಿಂದೆಗೆದುಕೊಂಡರು.







