ಹೆಸರಿನ ಗೊಂದಲ: ಜಾಮೀನು ಮಂಜೂರಾಗಿದ್ದ ಆರೋಪಿಯ ಬದಲು ಅತ್ಯಾಚಾರ ಆರೋಪಿಯನ್ನು ಬಿಡುಗಡೆಗೊಳಿಸಿದ ಜೈಲು ಸಿಬ್ಬಂದಿ!

ಸಾಂದರ್ಭಿಕ ಚಿತ್ರ | PC : freepik.com
ಫರೀದಾಬಾದ್: ಯಾರಾದರೂ ಇಬ್ಬರು ವ್ಯಕ್ತಿಗಳ ಹೆಸರು ಒಂದೇ ಆಗಿದ್ದಾಗ, ಅವರ ತಂದೆಯಂದಿರ ಹೆಸರನ್ನು ಪರಿಶೀಲಿಸುವುದು ಸಾಮಾನ್ಯ ಸಂಗತಿ. ತಂದೆಯಂದಿರ ಹೆಸರೂ ಒಂದೇ ಆಗಿದ್ದಾಗ? ಆಗಬಾರದ ಅನಾಹುತ ಆಗುವ ಸಾಧ್ಯತೆ ಹೆಚ್ಚಿರುತ್ತದೆ! ಇಂತಹುದೇ ಒಂದು ಅನಾಹುತದ ಕೆಲಸ ಫರೀದಾಬಾದ್ ಜೈಲು ಸಿಬ್ಬಂದಿಗಳಿಂದ ನಡೆದು ಹೋಗಿದೆ.
ನಿತೇಶ್ ಎಂಬ ಒಂದೇ ಹೆಸರಿನ ಇಬ್ಬರು ಆರೋಪಿಗಳನ್ನು ಫರೀದಾಬಾದ್ ಜೈಲಿನಲ್ಲಿಡಲಾಗಿತ್ತು. ಅವರಿಬ್ಬರ ತಂದೆಯಂದಿರ ಹೆಸರೂ ರವೀಂದರ್ ಎಂದೇ ಆಗಿತ್ತು. ಈ ಪೈಕಿ ಮನೆಗೆ ನುಗ್ಗಿ, ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಆರೋಪಿ ನಿತೇಶ್ ಗೆ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿತ್ತು. ಆದರೆ, ಅದೇ ಜೈಲಿನಲ್ಲಿ ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಸೆರೆವಾಸ ಅನುಭವಿಸುತ್ತಿರುವ ಮತ್ತೊಬ್ಬ ನಿತೇಶ್ ನನ್ನು ಒಂದೇ ಹೆಸರಿನಿಂದುಂಟಾದ ಗೊಂದಲದಿಂದ ಜೈಲಿನಿಂದ ಬಿಡುಗಡೆಗೊಳಿಸಿ, ಇದೀಗ ಜೈಲು ಸಿಬ್ಬಂದಿಗಳು ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.
ಅಕ್ಟೋಬರ್ 2021ರಲ್ಲಿ ಒಂಬತ್ತು ವರ್ಷದ ಅಪ್ತಾಪ್ತ ಬಾಲಕ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ರವೀಂದರ್ ಪಾಂಡೆ ಎಂಬವರ ನಿತೇಶ್ ಪಾಂಡೆ ಎಂಬ ಆರೋಪಿಯನ್ನು ಬಂಧಿಸಿ, ಫರೀದಾಬಾದ್ ಜೈಲಿನಲ್ಲಿಡಲಾಗಿತ್ತು. ಕಳೆದ ರವಿವಾರ ಮನೆಯೊಂದಕ್ಕೆ ಅತಿಕ್ರಮವಾಗಿ ಪ್ರವೇಶಿಸಿ, ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿದ್ದ 24 ವರ್ಷದ ನಿತೇಶ್ ಎಂಬ ಆರೋಪಿಯನ್ನೂ ಅದೇ ಜೈಲಿನಲ್ಲಿರಿಸಲಾಗಿತ್ತು. ಸ್ವಾರಸ್ಯವೆಂದರೆ, ಆತನ ತಂದೆಯ ಹೆಸರೂ ರವೀಂದರ್ ಎಂದೇ ಆಗಿತ್ತು.
ಮನೆಯೊಂದಕ್ಕೆ ಅತಿಕ್ರಮವಾಗಿ ಪ್ರವೇಶಿಸಿ, ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಆರೋಪಿ ನಿತೇಶ್ ಗೆ ಸೋಮವಾರ ಫರೀದಾಬಾದ್ ನ್ಯಾಯಾಲಯದ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಜಾಮೀನು ಮಂಜೂರು ಮಾಡಿದ್ದರು. ಕುತೂಹಲಕಾರಿ ಸಂಗತಿಯೆಂದರೆ, ಇಬ್ಬರೂ ಆರೋಪಿಗಳೂ ಒಂದೇ ಹೆಸರು ಹೊಂದಿದ್ದರೂ, ಓರ್ವ ಆರೋಪಿಗೆ ಮಾತ್ರ ಉಪ ನಾಮವಿದ್ದಂತಿದೆ. ಯಾವುದೇ ದೊಡ್ಡ ಪ್ರಮಾಣದ ಗೊಂದಲವನ್ನು ತಪ್ಪಿಸಲು ಈ ಸಂಗತಿ ಸಾಕಷ್ಟಾಗಿತ್ತು. ಆದರೆ, ಮಂಗಳವಾರ ಜೈಲಿನಿಂದ ಬಿಡುಗಡೆಯಾಗಬೇಕಿದ್ದ ಮನೆಯೊಂದಕ್ಕೆ ಅತಿಕ್ರಮವಾಗಿ ಪ್ರವೇಶಿಸಿ, ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ನಿತೇಶ್ ಎಂಬ ಆರೋಪಿಯ ಬದಲು, 9 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ಆರೋಪಿ ನಿತೇಶ್ ನನ್ನು ಬಿಡುಗಡೆಗೊಳಿಸಿರುವ ಜೈಲು ಸಿಬ್ಬಂದಿ ಪೇಚಿಗೆ ಸಿಳುಕಿದ್ದಾರೆ.
ಆದರೆ, ಇದೀಗ ತಾನೆಸಗಿರುವ ತಪ್ಪನ್ನು ಮುಚ್ಚಿಟ್ಟುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರುವ ಜೈಲು ಆಡಳಿತ ಮಂಡಳಿ, ತನ್ನ ಗುರುತನ್ನು ಮರೆಮಾಚುವ ಮೂಲಕ, ಅತ್ಯಾಚಾರದ ಆರೋಪಿ ನಿತೇಶ್ ಜೈಲಿನಿಂದ ಬಿಡುಗಡೆಗೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಸಬೂಬು ಹೇಳತೊಡಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜೈಲು ಉಪ ಪೊಲೀಸ್ ಅಧೀಕ್ಷಕ ವಿಕ್ರಮ್ ಸಿಂಗ್, “ತನ್ನ ಗುರುತನ್ನು ಮರೆಮಾಚಿ, ಜೈಲಿನಿಂದ ಬಿಡುಗಡೆಗೊಂಡಿರುವ ಆರೋಪಿ ನಿತೇಶ್ ಪಾಂಡೆ ವಿರುದ್ಧ ನಾವು ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ” ಎಂದು ತಿಳಿಸಿದ್ದಾರೆ.







