ಅಕ್ರಮವಾಗಿ ವಾಸಿಸುತ್ತಿದ್ದವರನ್ನು ತೆರವುಗೊಳಿಸಿದ ಬಳಿಕ ಮತದಾರರ ಪಟ್ಟಿಯಿಂದಲೂ ತೆಗೆದು ಹಾಕುತ್ತೇವೆ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

ಹಿಮಂತ ಬಿಸ್ವ ಶರ್ಮಾ (Photo: PTI)
ಹೊಸದಿಲ್ಲಿ : ಅಕ್ರಮವಾಗಿ ಜಮೀನು ಆಕ್ರಮಿಸಿಕೊಂಡು ವಾಸಿಸುತ್ತಿದ್ದವರನ್ನು ತೆರವು ಮಾಡಿದ ನಂತರ ಅವರ ಹೆಸರನ್ನು ಆ ಸ್ಥಳದ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಟಿನ್ಸುಕಿಯಾ ಜಿಲ್ಲೆಯ ಮಾರ್ಗೆರಿಟಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಹಿಮಂತ ಬಿಸ್ವ ಶರ್ಮಾ, ಹಿಂದಿನ ಪೀಳಿಗೆಯವರು ಕೆಳ ಮತ್ತು ಮಧ್ಯ ಅಸ್ಸಾಂನ್ನು ಉಳಿಸಲು ವಿಫಲರಾದರು. ಈಗ ರಾಜ್ಯದ ಮೇಲ್ಭಾಗ ಮತ್ತು ಉತ್ತರ ಭಾಗವನ್ನು ಉಳಿಸಲು ಪ್ರಯತ್ನ ಮಾಡಬೇಕಿದೆ ಎಂದು ಹೇಳಿದ್ದಾರೆ. ಇದು ಆ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಬಂಗಾಳಿ ಮುಸ್ಲಿಮರ ಬಗೆಗಿನ ಹೇಳಿಕೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ.
“ಯಾರನ್ನಾದರೂ ಒಂದು ಸ್ಥಳದಿಂದ ತೆರವು ಮಾಡಿದರೆ, ಅವರ ಹೆಸರು ಆ ಸ್ಥಳದ ಮತದಾರರ ಪಟ್ಟಿಯಲ್ಲಿ ಇರುವುದಿಲ್ಲ. ತೆರವು ಜೊತೆಗೆ ಅವರ ಹೆಸರನ್ನೂ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ” ಎಂದು ಶರ್ಮಾ ಹೇಳಿದರು.
ಅವರ ಕಾರ್ಯ ವಿಧಾನ ಈಗ ಮೇಲ್ಬಾಗದ ಮತ್ತು ಉತ್ತರ ಅಸ್ಸಾಂನ್ನು ಪ್ರವೇಶಿಸುವುದಾಗಿದೆ. ಕೆಳ ಮತ್ತು ಮಧ್ಯ ಅಸ್ಸಾಂನಂತೆ ಈ ಭಾಗಗಳು ಹೋಗದಂತೆ ನೋಡಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಕೂಡ ಹಿಮಂತ ಬಿಸ್ವ ಶರ್ಮಾ, ಅಪರಿಚಿತ ಜನರು ಕೆಳ ಮತ್ತು ಮಧ್ಯ ಅಸ್ಸಾಂನ ಜನಸಂಖ್ಯೆಯ ಅಂಕಿ-ಅಂಶಗಳನ್ನೇ ಬದಲಾಯಿಸಿದ್ದಾರೆ. ಈಗ ಮೇಲ್ಬಾಗದ ಮತ್ತು ಉತ್ತರ ಅಸ್ಸಾಂ ಅನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.







