ಇಂದಿರಾ ಗಾಂಧಿ ದಾಖಲೆ ಮುರಿದ ನರೇಂದ್ರ ಮೋದಿ: ಭಾರತದ ಎರಡನೆ ದೀರ್ಘಾವಧಿ ಪ್ರಧಾನಿ ಎಂಬ ಹಿರಿಮೆಗೆ ಭಾಜನ

ಪ್ರಧಾನಿ ನರೇಂದ್ರ ಮೋದಿ (PTI)
ಹೊಸದಿಲ್ಲಿ: ಭಾರತದ ಪ್ರಧಾನಿಯಾಗಿ ಇಂದಿಗೆ 4,078 ದಿನಗಳನ್ನು ಪೂರೈಸಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಪ್ರಧಾನಿಯಾಗಿ 4,077 ದಿನಗಳ ಕಾಲ ಸೇವೆ ಸಲ್ಲಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇಂದಿರಾ ಗಾಂಧಿ ಅವರು ಜನವರಿ 24, 1966ರಿಂದ ಮಾರ್ಚ್ 24, 1977ರವರೆಗೆ ಸತತ 4,077 ದಿನಗಳ ಕಾಲ ಸತತವಾಗಿ ಭಾರತದ ಪ್ರಧಾನಿಯಾಗಿದ್ದ ದಾಖಲೆ ಹೊಂದಿದ್ದರು.
ಈ ಮೈಲಿಗಲ್ಲಿನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಎರಡನೆ ಪ್ರಧಾನಿ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಭಾರತದ ಅತ್ಯಂತ ಸುದೀರ್ಘ ಅವಧಿಯ ಪ್ರಧಾನಿ ಎಂಬ ದಾಖಲೆ ಭಾರತದ ಪ್ರಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಹೆಸರಿನಲ್ಲಿದೆ.
ಇಂದಿಗೆ (ಜುಲೈ 25, 2025) ನರೇಂದ್ರ ಮೋದಿ ಅವರು 4,078 ದಿನಗಳ ಕಾಲ ಸುದೀರ್ಘಾವಧಿಯ ಪ್ರಧಾನಿಯಾಗಿದ್ದು, ಈ ಸಾಧನೆಯ ಮೂಲಕ ಹಲವು ಐತಿಹಾಸಿಕ ದಾಖಲೆಗಳಿಗೆ ಅವರು ಪಾತ್ರರಾಗಿದ್ದಾರೆ.
ಸ್ವಾತಂತ್ರ್ಯಾನಂತರ ಜನಿಸಿದ ಮೊಟ್ಟಮೊದಲ ಹಾಗೂ ಏಕೈಕ ಪ್ರಧಾನಿ ನರೇಂದ್ರ ಮೋದಿ ಆಗಿದ್ದು, ಸುದೀರ್ಘ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಪ್ರಪ್ರಥಮ ಕಾಂಗ್ರೆಸ್ಸೇತರ ಪ್ರಧಾನಿಯೂ ಆಗಿದ್ದಾರೆ. ಇದರೊಂದಿಗೆ, ಭಾರತದ ಪ್ರಧಾನಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಪ್ರಪ್ರಥಮ ಹಿಂದಿಯೇತರ ಭಾಷಿಕ ರಾಜ್ಯದ ಪ್ರಧಾನಿ ಎಂಬ ದಾಖಲೆಗೂ ಅವರು ಭಾಜನರಾಗಿದ್ದಾರೆ.
ಸತತ ಎರಡು ಬಾರಿ ಪೂರ್ಣಾವಧಿ ಪೂರೈಸಿದ ಹಾಗೂ ಸತತ ಎರಡು ಬಾರಿ ಬಹುಮತದಿಂದ ಚುನಾಯಿತಗೊಂಡ ಏಕೈಕ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಶ್ರೇಯಕ್ಕೂ ನರೇಂದ್ರ ಮೋದಿ ಪಾತ್ರರಾಗಿದ್ದಾರೆ.







