ಕೇಂದ್ರದ ನರೇಂದ್ರ ಮೋದಿ ಸರಕಾರವು ‘ಇಣುಕಿ ನೋಡುವ ಸರಕಾರ’: ಮಹುವಾ ಮೊಯಿತ್ರಾ

ಮಹುವಾ ಮೊಯಿತ್ರಾ Photo- PTI
ಹೊಸದಿಲ್ಲಿ: ಕೇಂದ್ರದ ನರೇಂದ್ರ ಮೋದಿ ಸರಕಾರವು ‘ಇಣುಕಿ ನೋಡುವ ಸರಕಾರ’ ಎಂದು ತೃಣಮೂಲ ಕಾಂಗ್ರೆಸ್ (ಟಿಎಮ್ಸಿ) ಸಂಸದೆ ಮಹುವಾ ಮೊಯಿತ್ರಾ ಬುಧವಾರ ಬಣ್ಣಿಸಿದ್ದಾರೆ.
ಪ್ರತಿಪಕ್ಷ ನಾಯಕರು ಮತ್ತು ಪತ್ರಕರ್ತರ ಐಫೋನ್ಗಳಿಗೆ ‘ಸರಕಾರಿ ಪ್ರಾಯೋಜಿತ ಕನ್ನಗಾರರು’ ಕನ್ನ ಹಾಕಿದಂತೆ ಕಂಡು ಬರುತ್ತಿದೆ ಎಂದು ಐಫೋನ್ ತಯಾರಕ ಸಂಸ್ಥೆ ಆ್ಯಪಲ್ ಎಚ್ಚರಿಕೆ ನೀಡಿದ ಬಳಿಕ ಮಹುವಾ ‘ಇಂಡಿಯಾ ಟುಡೆ’ ಜೊತೆಗೆ ಮಾತನಾಡುತ್ತಾ ಈ ಪ್ರತಿಕ್ರಿಯೆ ನಿಡಿದ್ದರೆ.
ಇದು ಖಾಸಗಿತನದ ಗಂಭೀರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ ಅವರು, ಈ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಯಾರು ಧ್ವನಿ ಎತ್ತುತ್ತಾರೋ ಅವರ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಹೇಳಿದರು.
ಆ್ಯಪಲ್ ನೀಡಿರುವ ಎಚ್ಚರಿಕೆ ಸಂದೇಶದ ಬಗ್ಗೆ ಅವರು ಬುಧವಾರ ಲೋಕಸಭಾ ಸ್ಪೀಕರ್ ಓಮ್ ಬಿರ್ಲಾಗೆ ಪತ್ರ ಬರೆದಿದ್ದಾರೆ. ‘‘ಸಾಂವಿಧಾನಿಕ ಹಕ್ಕುಗಳು ಮತ್ತು ಕಾನೂನಿನ ಆಡಳಿತವನ್ನು ಉಲ್ಲಂಘಿಸಿ ಪ್ರತಿಪಕ್ಷ ಸದಸ್ಯರ ಮೇಲೆ ಕಣ್ಗಾವಲು ಇಡಲಾಗುತ್ತಿರುವ ಗಂಭೀರ ವಿಷಯದ ಬಗ್ಗೆ ಗೌರವಾನ್ವಿತ ಸ್ಪೀಕರ್ಗೆ ಪತ್ರವೊಂದನ್ನು ಬರೆದಿದ್ದೇನೆ’’ ಎಂದು ಅವರು ಹೇಳಿದರು.
ಆ್ಯಪಲ್ ನೀಡಿರುವ ಎಚ್ಚರಿಕೆಗೂ, ಜಾರ್ಜ್ ಸೊರೊಸ್ಗೂ ಸಂಬಂಧವಿದೆ ಎಂಬ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಮಹುವಾ, ‘‘ಇದು ಹಾಸ್ಯಾಸ್ಪದ ಹೇಳಿಕೆ’’ ಎಂದರು.
‘‘ಎಚ್ಚರಿಕೆ ಕಳುಹಿಸಿದ್ದು ಆ್ಯಪಲ್’’ ಎಂದು ಮಹುವಾ ಹೇಳಿದರು. ‘‘ಆ್ಯಪಲ್ ಸಲಕರಣೆಗಳನ್ನು ಜಗತ್ತಿನಲ್ಲೇ ಅತ್ಯಂತ ಸುರಕ್ಷಿತವೆಂದು ಭಾವಿಸಲಾಗಿದೆ, ಯಾಕೆಂದರೆ ಕಂಪೆನಿಯು ನಿರಂತರವಾಗಿ ತನ್ನ ತಂತ್ರಜ್ಞಾನವನ್ನು ನವೀಕರಿಸುತ್ತದೆ ಮತ್ತು ತನ್ನ ಗ್ರಾಹಕರ ಮಾಹಿತಿಯನ್ನು ಸುರಕ್ಷಿತವಾಗಡುತ್ತದೆ’’ ಎಂದು ಅವರು ಹೇಳಿದರು.







