ಬಿಹಾರ ವಿಧಾನಸಭಾ ಚುನಾವಣೆ | NDAಗೆ ಅಲ್ಪ ಮುನ್ನಡೆ ಸಾಧ್ಯತೆ: ಆ್ಯಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಫಲಿತಾಂಶದ ಭವಿಷ್ಯ

ತೇಜಸ್ವಿ ಯಾದವ್ , ನಿತೀಶ್ ಕುಮಾರ್ | Photo Credit : indiatoday.in
ಹೊಸದಿಲ್ಲಿ: ಭಾರಿ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ NDA ಮೈತ್ರಿಕೂಟ ಅಲ್ಪ ಮುನ್ನಡೆಯೊಂದಿಗೆ ಅಧಿಕಾರಕ್ಕೆ ಮರಳಬಹುದು ಎಂದು ಆ್ಯಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಫಲಿತಾಂಶ ಭವಿಷ್ಯ ನುಡಿದಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆರೋಗ್ಯ ಕ್ಷೀಣಿಸಿದೆ ಎಂಬ ವದಂತಿಗಳು ಹಾಗೂ ವಿವಾದಾತ್ಮಕ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ನಡುವೆಯೂ NDA 121-141 ಸ್ಥಾನಗಳು ಹಾಗೂ ಮಹಾಘಟಬಂಧನ್ 98-118 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಈ ಚುನಾವಣೋತ್ತರ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.
ಈ ನಡುವೆ, ಭಾರಿ ನಿರೀಕ್ಷೆ ಹುಟ್ಟಿಸಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ್ ಸೂರಜ್ ಪಕ್ಷ ಯಾವುದೇ ಸ್ಥಾನ ಗಳಿಸಲಾರದು ಅಥವಾ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಬಹುದು ಎಂದೂ ಈ ಸಮೀಕ್ಷೆಯಲ್ಲಿ ಭವಿಷ್ಯ ನುಡಿಯಲಾಗಿದೆ.
ಆ್ಯಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆಯ ಶೇಕಡಾವಾರು ಮತಹಂಚಿಕೆ ಅಂದಾಜಿನ ಪ್ರಕಾರ, ಈ ಬಾರಿ NDA ಶೇ. 43ರಷ್ಟು ಮತ ಪಡೆಯಲಿದ್ದರೆ, ಅದರ ಹಿಂದೆಯೇ ಇರುವ ಮಹಾಘಟಬಂಧನ್ ಶೇ. 41ರಷ್ಟು ಮತ ಪಡೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. 2020ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿ NDA ಮೈತ್ರಿಕೂಟ ಶೇ. 6ರಷ್ಟು ಹೆಚ್ಚುವರಿ ಪಡೆಯುವ ಸಾಧ್ಯತೆ ಇದ್ದು, ಇದು ಶೇ. 6ರಷ್ಟು ಏರಿಕೆಯಾಗಿದೆ. 2020ರ ವಿಧಾನಸಭಾ ಚುನಾವಣೆಯಲ್ಲಿ NDA ಶೇ. 37ರಷ್ಟು ಮತ ಪಡೆದಿತ್ತು.
2020ರ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಚಿರಾಗ್ ಪಾಸ್ವಾನ್ ರ ಲೋಕ್ ಜನ್ ಶಕ್ತಿ ಪಕ್ಷ ಹಾಗೂ ಉಪೇಂದ್ರ ಕುಶ್ವಾಹ ಈ ಬಾರಿ ಒಟ್ಟಾಗಿ ಸ್ಪರ್ಧಿಸಿರುವುದರಿಂದ ಈ ಶೇ. 6ರಷ್ಟು ಹೆಚ್ಚುವರಿ ಮತ NDAಗೆ ಲಭಿಸಲಿದೆ ಎಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.
ವಿಧಾನಸಭಾ ಕ್ಷೇತ್ರವಾರು ಗೆಲುವಿನ ಲೆಕ್ಕದಲ್ಲಿ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ ಯಾವುದೇ ಪ್ರಭಾವ ಬೀರುವ ಸಾಧ್ಯತೆ ಇಲ್ಲ. ಆದರೆ, ಅದು ಮಹಾಘಟಬಂಧನ್ ನಿಂದ ಒಂದಿಷ್ಟು ಮತವನ್ನು ಕೀಳುವ ಸಾಧ್ಯತೆ ಇದೆ ಎಂದು ಈ ಸಮೀಕ್ಷೆಯಲ್ಲಿ ಹೇಳಲಾಗಿದೆ. ತನ್ನನ್ನು ತಾನು ಬದಲಾವಣೆಯ ಪ್ರತಿನಿಧಿ ಎಂದು ಹೇಳಿಕೊಂಡಿರುವ ಜನ್ ಸುರಾಜ್ ಪಕ್ಷ, ಈ ಬಾರಿಯ ಚುನಾವಣೆಯಲ್ಲಿ ಶೇ. 4ರಷ್ಟು ಮತ ಪಡೆಯಬಹುದು ಎಂದು ಅಂದಾಜಿಸಲಾಗಿದೆ.
ಮಂಗಳವಾರ ಪ್ರಕಟವಾದ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಆಡಳಿತಾರೂಢ NDA ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಲಿದೆ ಎಂದು ಅಂದಾಜಿಸಲಾಗಿತ್ತು. ಹಾಗೆಯೇ, ಮಹಾಘಟಬಂಧನ್ 100 ಸ್ಥಾನಗಳ ಗಡಿ ದಾಟುವುದು ಅಸಾಧ್ಯ ಎಂದೂ ಹೇಳಲಾಗಿತ್ತು.
ಒಂದು ವೇಳೆ ಚುನಾವಣೋತ್ತರ ಸಮೀಕ್ಷೆಯ ಅಂಕಿ-ಸಂಖ್ಯೆಗಳು ನಿಜವಾಗಿ ಹೊರಹೊಮ್ಮಿದರೆ, 20 ವರ್ಷಗಳ ಆಡಳಿತದ ಬಳಿಕ ಆಡಳಿತವಿರೋಧಿ ಅಲೆ ಎದುರಿಸುತ್ತಿರುವ NDA ಹಾಗೂ ನಿತೀಶ್ ಕುಮಾರ್ ಅವರಿಗೆ ಇದು ನಿಬ್ಬೆರಗಾಗಿಸುವ ಗೆಲುವಾಗಲಿದೆ.
2020ರಲ್ಲಿ ಆಡಳಿತ ವಿರೋಧಿ ಅಲೆಯ ಬಿಸಿಯನ್ನು ಎದುರಿಸಿದ್ದ ಜೆಡಿಯು, 2015ರಲ್ಲಿ ಗೆಲುವು ಸಾಧಿಸಿದ್ದ 71 ಸ್ಥಾನಗಳ ಬದಲಿಗೆ ಕೇವಲ 43 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ 74 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ತೇಜಸ್ವಿ ಯಾದವ್ ರ RJD 75 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಹೀಗಿದ್ದೂ, NDA ಸರಳ ಬಹುಮತದೊಂದಿಗೆ ಸರಕಾರ ರಚಿಸಿತ್ತು.
ಸೌಜನ್ಯ: indiatoday.in







