ನ್ಯಾಶನಲ್ ಹೆರಾಲ್ಡ್ ಆಸ್ತಿ ಮುಟ್ಟುಗೋಲು, ಕೇಂದ್ರದಿಂದ ಸೇಡಿನ ರಾಜಕೀಯ: ಖರ್ಗೆ ಕಿಡಿ

ಖರ್ಗೆ| Photo: PTI
ಹೊಸದಿಲ್ಲಿ: ತಾನು ಪ್ರವರ್ತಕನಾಗಿರುವ ರಾಷ್ಟ್ರೀಯ ಹೆರಾಲ್ಡ್ ದಿನಪತ್ರಿಕೆ ವಿರುದ್ಧ ಜಾರಿ ನಿರ್ದೇಶನಾಲಯದ ಕ್ರಮಕ್ಕಾಗಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರದ ಮೇಲೆ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದು, ‘ಕೀಳುಮಟ್ಟದ ಸೇಡಿನ ತಂತ್ರಗಾರಿಕೆʼಯಿಂದ ತನ್ನನ್ನು ಹೆದರಿಸಲು ಸಾಧ್ಯವಿಲ್ಲವೆಂದು ಅದು ಹೇಳಿದೆ.
ವಿರೋಧಪಕ್ಷಗಳನ್ನು ಬೆದರಿಸಲು ಏಜೆನ್ಸಿಗಳ ದುರ್ಬಳಕೆ ಮಾಡಿಕೊಳ್ಳುವ ಕೇಂದ್ರ ಸರಕಾರದ ಕಾರ್ಯವಿಧಾನದಲ್ಲಿ ಹೊಸತೇನೂ ಇಲ್ಲ ಹಾಗೂ ಈಗ ಕೇಂದ್ರ ಸರಕಾರವು ಇಡೀ ದೇಶದ ಮುಂದೆ ಸಂಪೂರ್ಣ ಬೆತ್ತಲಾಗಿ ನಿಂತಿದೆ ಎಂದು ಅದು ಕಟಕಿಯಾಡಿದೆ.
ಚತ್ತೀಸ್ಗಢ,ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಮಿಜೊರಾಂಗಳಲ್ಲಿ ಸೋಲನುಭವಿಸುವುದನ್ನು ಮನಗಂಡಿರುವ ಕೇಂದ್ರದ ಬಿಜೆಪಿ ಸರಕಾರವು ತನ್ನ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆದರೆ ಅದರ ಪ್ರಯತ್ನವು ವಿಫಲವಾಗಲಿದೆ ಹಾಗೂ ಚುನಾವಣೆಗಳಲ್ಲಿ ಬಿಜೆಪಿ ಸೋಲನುಭವಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಸ್ವಾತಂತ್ರ್ಯ ಗಂಡಾಂತರದಲ್ಲಿದೆ. ನಿಮ್ಮ ಎಲ್ಲಾ ಶಕ್ತಿಯನ್ನು ಬಳಸಿಕೊಂಡು ಅದನ್ನು ರಕ್ಷಿಸಿರಿ’ ಎಂದು ಜವಾಹರಲಾಲ್ ನೆಹರೂ ಅವರು ಹೇಳಿದ್ದ ಮಾತುಗಳು ಇಂದಿಗೂ ಪ್ರಸಕ್ತವಾಗಿವೆ. ಭಾರತದ ಪ್ರಜಾತಾಂತ್ರಿಕ ಗಣರಾಜ್ಯವು ಯಾವ ಆದರ್ಶಗಳಿಗಾಗಿ ಸ್ಥಾಪನೆಯಾಗಿತ್ತೋ ಅವುಗಳಿಗಾಗಿ ಪಕ್ಷವು ತನ್ನ ಹೋರಾಟವನ್ನು ಮುಂದುವರಿಸಲಿದೆ ಎಂದು ಖರ್ಗೆ ಹೇಳಿದರು.
ಕಾಂಗ್ರೆಸ್ ಪ್ರವರ್ತಕನಾಗಿರುವ ರಾಷ್ಟ್ರೀಯ ಹೆರಾಲ್ಡ್ ದಿನಪತ್ರಿಕೆಯ ವಿರುದ್ಧ ನಡೆಸಲಾಗುತ್ತಿರುವ ಕಪ್ಪುಹಣ ಬಿಳುಪು ಪ್ರಕರಣದ ತನಿಖೆಯ ಭಾಗವಾಗಿ ಜಾರಿನಿರ್ದೇಶನಾಲಯವು 751.90 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿತ್ತು.
‘‘ ಈಡಿಯ ಈ ಕ್ರಮದ ಸಿಂಧುತ್ವವನ್ನು ಪ್ರಶ್ನಿಸಿರುವ ಕಾಂಗ್ರೆಸ್ ಪಕ್ಷವು ಕಪ್ಪು ಹಣ ಬಿಳುಪು ತಡೆ ಕಾಯ್ದೆ ಯಡಿ ಯಾವುದೇ ಆಸ್ತಿಯನ್ನು ಮುಟ್ಟುಗೋಲು ಹಾಕುವಾಗ ಅಪರಾಧ ನಡೆದಿರುವ ಬಗ್ಗೆ ಖಚಿತವಾದ ಪುರಾವೆಗಳಿರಬೇಕು. ಆದರೆ ಈ ಪ್ರಕರಣದಲ್ಲಿ ಯಾವುದೇ ಚರಾಸ್ತಿಯ ವರ್ಗಾವಣೆಯಾಗಿಲ್ಲ. ಹಣಕಾಸಿನ ವ್ಯವಹಾರವೂ ನಡೆದಿಲ್ಲ. ಆರೋಪಿಸಲಾದ ಅಪರಾಧದಡಿ ಯಾವುದೇ ಆದಾಯ ಕೂಡಾ ಸೃಷ್ಟಿಯಾಗಿಲ್ಲ. ತಾವು ವಂಚನೆಗೊಳಗಾಗಿದ್ದೇವೆಂದು ಒಬ್ಬರೇ ಒಬ್ಬರಿಂದಲೂ ದೂರು ನೀಡಿಲ್ಲ’’ ಎಂದು ಕಾಂಗ್ರೆಸ್ ಪಕ್ಷವು xನಲ್ಲಿ ಪೋಸ್ಟ್ ಮಾಡಿದೆ.
ನ್ಯಾಶನಲ್ ಹೆರಾಲ್ಡ್ ಆಸ್ತಿಯನ್ನು ಮುಟ್ಟುಗೋಲುಹಾಕಿರುವುದು ಕಾನೂನಿಗೆ ವಿರುದ್ಧವಾದುದೆಂದು ಕಾಂಗ್ರೆಸ್ ಮಾಜಿ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ. ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಈಡಿ ಈ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಕಾಂಗ್ರೆಸ್ ಮಿತ್ರಪಕ್ಷವಾದ ಶಿವಸೇನಾ (ಉದ್ಧವ್) ಆರೋಪಿಸಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನ್ಯಾಶನಲ್ ಹೆರಾಲ್ಡ್ ಕೊಡುಗೆಯನ್ನು ನೀಡಿದೆ ಎಂದವರು ಹೇಳಿದ್ದಾರೆ.







