ಕೋಟಾ | ರಾಷ್ಟ್ರಮಟ್ಟದ ಬಿಲ್ಗಾರಿಕೆ ಪಟು ರೈಲಿನಿಂದ ಬಿದ್ದು ಮೃತ್ಯು

ಸಾಂದರ್ಭಿಕ ಚಿತ್ರ
ಕೋಟಾ: ಮಹಾರಾಷ್ಟ್ರದ ನಾಸಿಕ್ನ ಪ್ರತಿಭಾವಂತ ಬಿಲ್ಗಾರಿಕೆ ಅಥ್ಲೀಟ್ ಒಬ್ಬರು ರಾಜಸ್ತಾನದ ಕೋಟಾ ಜಂಕ್ಷನ್ನಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.
ರಾಷ್ಟ್ರಮಟ್ಟದ ಅಥ್ಲೀಟ್ ಆಗಿದ್ದ ಅರ್ಜುನ್ ಸೋನಾವಾಲೆ ಅವರು ಪಂಜಾಬ್ನ ಭಟಿಂಡಾದಲ್ಲಿ ನಡೆದ ಸ್ಪರ್ಧಾಕೂಟದಲ್ಲಿ ಭಾಗವಹಿಸಿ ತಂಡದ ಸದಸ್ಯರು ಮತ್ತು ಕೋಚ್ ಜತೆ ವಾಪಸ್ಸಾಗುತ್ತಿದ್ದರು. ತಂಡದ ಸಹ ಆಟಗಾರರ ಜತೆ ಶಕೂರ್ ಬಸ್ತಿ- ಮುಂಬೈ ಸೆಂಟ್ರಲ್ ಏಸಿ ಸ್ಪೆಷಲ್ ರೈಲಿನಲ್ಲಿ ಅವರು ಮಹಾರಾಷ್ಟ್ರಕ್ಕೆ ಬರುತ್ತಿದ್ದರು ಎಂದು ಸರ್ಕಾರಿ ರೈಲ್ವೆ ಪೊಲೀಸರು ಹೇಳಿದ್ದಾರೆ.
ರಾತ್ರಿ 8.30ರ ಸುಮಾರಿಗೆ ಕೋಟಾ ಜಂಕ್ಷನ್ನಲ್ಲಿ ನಿಲ್ಲಲು ನಿಧಾನವಾಗುತ್ತಿದ್ದಾಗ ಬಿ4 ಬೋಗಿಯ ಪ್ರವೇಶದ್ವಾರದಲ್ಲಿ ನಿಂತಿದ್ದರು. ರೈಲು ನಿಂತ ಬಳಿಕ ಮತ್ತೊಬ್ಬ ಕೋಚ್ ಬಳಿಗೆ ಆಹಾರಕ್ಕಾಗಿ ಹೋಗಲು ಕಾಯುತ್ತಿದ್ದರು. ಆಕಸ್ಮಿಕವಾಗಿ ಬಿದ್ದ ಅಥ್ಲೀಟ್, ರೈಲು ಹಾಗೂ ಪ್ಲಾಟ್ಫಾರಂ ಮಧ್ಯೆ ಸಿಕ್ಕಿಹಾಕಿಕೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿ ಪ್ರಯಾಣಿಕನನ್ನು ಹೊರಕ್ಕೆಳೆದು, ರೈಲನ್ನು ನಿಲುಗಡೆಗೊಳಿಸಿದರು. ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ರಾತ್ರಿ ಆವರು ಮೃತಪಟ್ಟರು. ಭಾನುವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆದಿದೆ ಎಂದು ಜಿಆರ್ಪಿ ಅಧಿಕಾರಿ ದಲ್ಚಂದ್ ಸಿಯಾನ್ ಹೇಳಿದ್ದಾರೆ.
ಅರ್ಜುನ್ ಸೋನಾವಾಲೆ ಪದವಿ ಓದುತ್ತಿದ್ದರು ಹಾಗೂ ರಾಷ್ಟ್ರ ಹಾಗೂ ರಾಜ್ಯಮಟ್ಟದ ಬಿಲ್ಗಾರಿಕೆ ಸ್ಪರ್ಧೆಗಳಲ್ಲಿ 8 ಪದಕ ಗೆದ್ದಿದ್ದರು ಎಂದು ಕೋಚ್ ವಿವರ ನೀಡಿದ್ದಾರೆ.







