ದೇಶಾದ್ಯಂತ 450 ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಹೆಚ್ಚಳಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಅನುಮೋದನೆ

Image credit: Pexels
ಹೊಸದಿಲ್ಲಿ, ಜ.8: ಅರ್ಹ ವೈದ್ಯರುಗಳ ಕೊರತೆಯನ್ನು ನೀಗಿಸುವ ಪ್ರಯತ್ನವಾಗಿ ಹಾಗೂ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್ಎಂಸಿ) 2025-26ನೇ ಸಾಲಿನ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹೆಚ್ಚುವರಿಯಾಗಿ 450 ಸ್ನಾತಕೋತ್ತರ ವೈದ್ಯಕೀಯ ಸೀಟುಗಳಿಗೆ ಅನುಮೋದನೆಯನ್ನು ನೀಡಿದೆ.
ದೇಶಾದ್ಯಂತ ವೈದ್ಯಕೀಯ ಕಾಲೇಜುಗಳು ಸಲ್ಲಿಸಿದ ಮನವಿಗಳನ್ನು ಪರಿಶೀಲನೆ ನಡೆಸಿದ ಬಳಿಕ ವೈದ್ಯಕೀಯ ಮೌಲ್ಯಮಾಪನ ಹಾಗೂ ರೇಟಿಂಗ್ ಮಂಡಳಿ (ಎಂಎಆರ್ಬಿ)ಯ ಮೊದಲ ಅನುಮೋದನಾ ಸಮಿತಿಯು ಈ ಕ್ರಮವನ್ನು ಕೈಗೊಂಡಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗದ ಸೆಕ್ಷನ್ 28(5)ರಡಿ ಪ್ರದತ್ತವಾದ ಅಧಿಕಾರದಡಿ ಆಯೋಗವು ಸ್ನಾತಕೋತ್ತರ ಸೀಟುಗಳ ಸಂಖ್ಯೆಯಲ್ಲಿ ಏರಿಕೆ ಮಾಡಿದೆ. ಜನರಲ್ ಮೆಡಿಸಿನ್, ರೇಡಿಯೊ ಡಯಾಗ್ನಸಿಸ್, ಚರ್ಮರೋಗಶಾಸ್ತ್ರ (ಡಿವಿಎಲ್), ಜನರಲ್ ಸರ್ಜರಿ, ಪ್ರಸೂತಿ ಹಾಗೂ ಸ್ತ್ರೀರೋಗ, ಶಿಶು ವೈದ್ಯಕೀಯ, ಮನೋರೋಗ, ನೇತ್ರ ಅಧ್ಯಯನ ಶಾಸ್ತ್ರ, ತುರ್ತು ವೈದ್ಯಶಾಸ್ತ್ರ ಹಾಗೂ ಅರಿವಳಿಕೆ ಶಾಸ್ತ್ರ ಸೇರಿದಂತೆ ಹಲವಾರು ಕ್ಲಿನಿಕಲ್ ಹಾಗೂ ನಾನ್-ಕ್ಲಿನಿಕಲ್ ಸ್ನಾತೆಕೋತ್ತರ ಅಧ್ಯಯನ ಕ್ಷೇತ್ರಗಳಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.







