ವೈದ್ಯಕೀಯ ಸೀಟುಗಳಿಗೆ ಮಿತಿ ಹೇರುವ ನಿರ್ಧಾರ ಮುಂದೂಡಿದ ರಾಷ್ಟ್ರೀಯ ವೈದ್ಯಕೀಯ ಆಯೋಗ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಸ್ನಾತಕ ವೈದ್ಯಕೀಯ ಪದವಿ ಸೀಟ್ ಗಳ ಸಂಖ್ಯೆಯನ್ನು ಪ್ರತಿ ರಾಜ್ಯದಲ್ಲಿ 10 ಲಕ್ಷ ಜನಸಂಖ್ಯೆಗೆ 100ಕ್ಕೆ ಸೀಮಿತಗೊಳಿಸುವ ತನ್ನ ನಿರ್ಧಾರವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಬುಧವಾರ ಮುಂದೂಡಿದೆ.
ಆಯೋಗದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ನಾತಕಪದವಿ ವೈದ್ಯಕೀಯ ಶಿಕ್ಷಣ ಮಂಡಳಿಯು ಆಗಸ್ಟ್ 16ರಂದು ಈ ಸಂಬಂಧ ಅಧಿಸೂಚನೆಯೊಂದನ್ನು ಹೊರಡಿಸಿತ್ತು. ಮುಂದಿನ ಶೈಕ್ಷಣಿಕ ವರ್ಷದಿಂದ ಜನಸಂಖ್ಯೆಗೆ ಅನುಗುಣವಾಗಿ ನೂತನ ವೈದ್ಯಕೀಯ ಕಾಲೇಜುಗಳಿಗೆ ಮಂಜೂರಾತಿ ಮತ್ತು ವೈದ್ಯಕೀಯ ಸೀಟುಗಳ ಹೆಚ್ಚಳಕ್ಕೆ ಅನುಮೋದನೆ ನೀಡಲಾಗುವುದು ಎಂದು ಅಧಿಸೂಚನೆ ಹೇಳಿದೆ.
ಆದರೆ, ಈ ಅಧಿಸೂಚನೆಗೆ ತಮಿಳುನಾಡು, ಕರ್ನಾಟಕ ಮತ್ತು ಪುದುಚೇರಿ ಬಲವಾದ ಪ್ರತಿಭಟನೆ ಸಲ್ಲಿಸಿದ್ದವು.
ಈ ಹಿನ್ನೆಲೆಯಲ್ಲಿ, ಸಂಬಂಧಪಟ್ಟವರೊಂದಿಗೆ ಹೆಚ್ಚಿನ ಸಮಾಲೋಚನೆಗಳನ್ನು ನಡೆಸಿ ಹಾಗೂ ಎಲ್ಲಾ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು 2025-26ರ ಶೈಕ್ಷಣಿಕ ವರ್ಷದಿಂದ ನೂತನ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಆಯೋಗ ಹೇಳಿದೆ.
ವೈದ್ಯಕೀಯ ಸೀಟುಗಳಿಗೆ ಮಿತಿ ಹೇರುವ ಕ್ರಮವು ಸಂಪನ್ಮೂಲಗಳ ಸಮಾನ ಹಂಚಿಕೆಗೆ ನೆರವಾಗುತ್ತದೆ ಮತ್ತು ರಾಜ್ಯವೊಂದರಲ್ಲಿ ವೈದ್ಯಕೀಯ ಕಾಲೇಜುಗಳು ಕಿಕ್ಕಿರಿಯುವುದನ್ನು ತಡೆಯುತ್ತದೆ ಎಂದು ಆಯೋಗ ಹೇಳಿದೆ. ಅದೂ ಅಲ್ಲದೆ, ಬಿಹಾರ ಮತ್ತು ಜಾರ್ಖಂಡ್ ಗಳಂಥ ರಾಜ್ಯಗಳು 40,000 ಸೀಟುಗಳನ್ನು ಹೆಚ್ಚುವರಿಯಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದೆ. ಈ ರಾಜ್ಯಗಳಲ್ಲಿ 70 ಶೇ. ವೈದ್ಯಕೀಯ ಸೀಟುಗಳ ಕೊರತೆಯಿದೆ.
ಎಲ್ಲಾ ಐದು ದಕ್ಷಿಣದ ರಾಜ್ಯಗಳು- ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಕೇರಳ- ಪ್ರಸಕ್ತ 10 ಲಕ್ಷ ಜನಸಂಖ್ಯೆಗೆ 100ಕ್ಕಿಂತಲೂ ಅಧಿಕ ವೈದ್ಯಕೀಯ ಸೀಟುಗಳನ್ನು ಹೊಂದಿವೆ. ತಮಿಳುನಾಡು 11,600 ವೈದ್ಯಕೀಯ ಸೀಟುಗಳನ್ನು ಹೊಂದಿದ್ದರೆ, ಕರ್ನಾಟಕ 11,695 ಸೀಟುಗಳನ್ನು ಹೊಂದಿವೆ. ಆಯೋಗದ ಮಿತಿ ಹೇರುವ ನಿಯಮದ ಪ್ರಕಾರ, ತಮಿಳುನಾಡು ಸುಮಾರು 7,600 ಮತ್ತು ಕರ್ನಾಟಕ 6,700 ಸೀಟುಗಳನ್ನು ಹೊಂದಬಹುದಾಗಿದೆ.
ಈ ಹಿನ್ನೆಲೆಯಲ್ಲಿ, ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರವೊಂದನ್ನು ಬರೆದು, ನೂತನ ನಿಯಮವನ್ನು ಜಾರಿಗೊಳಿಸದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಸೂಚನೆ ನೀಡುವಂತೆ ಒತ್ತಾಯಿಸಿದ್ದರು. ‘‘ಈ ನಿಯಮವನ್ನು ಹೇರುವುದು ರಾಜ್ಯ ಸರಕಾರಗಳ ಮೇಲೆ ನಡೆಸುವ ದಾಳಿಯಾಗಿದೆ ಹಾಗೂ ತಮ್ಮ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳ ಮೇಲೆ ಹೂಡಿಕೆ ಮಾಡುತ್ತಾ ಬಂದಿರುವ ರಾಜ್ಯಗಳಿಗೆ ನೀಡುವ ಶಿಕ್ಷೆಯಾಗಿದೆ’’ ಎಂದು ಸ್ಟಾಲಿನ್ ಹೇಳಿದ್ದರು.
ಕರ್ನಾಟಕ ಸರಕಾರವೂ ಕಳೆದ ತಿಂಗಳು ತನ್ನ ಪ್ರತಿಭಟನೆ ಸಲ್ಲಿಸಿತ್ತು. ಅದು ದಕ್ಷಿಣ ಭಾರತದಲ್ಲಿ ಆರೋಗ್ಯ ಸೇವೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ.