ಇನ್ನು ಮುಂದೆ ರಾಷ್ಟ್ರೀಯ ವೈದ್ಯಕೀಯ ರಿಜಿಸ್ಟರ್ ನಲ್ಲಿ ನೋಂದಣಿ ಮಾಡುವುದು ಕಡ್ಡಾಯವಲ್ಲ: ಕೇಂದ್ರ ಸರ್ಕಾರ!

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಆ.17: ವೈದ್ಯರು ರಾಷ್ಟ್ರೀಯ ವೈದ್ಯಕೀಯ ರಿಜಿಸ್ಟರ್(ಎನ್ಎಂಆರ್)ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂಬ ನಿಯಮವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಒಂದೇ ವರ್ಷದೊಳಗೆ ಹಿಂದೆಗೆದುಕೊಂಡಿದ್ದು, ನೋಂದಣಿಯನ್ನು ಈಗ ಸ್ವಯಂಪ್ರೇರಿತಗೊಳಿಸಿದೆ.
ಕಳೆದ ವರ್ಷದ ಆ.23ರಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಚಾಲನೆ ನೀಡಿದ್ದ ಎನ್ಎಂಆರ್ ಆಧುನಿಕ ವೈದ್ಯಕೀಯ ವೃತ್ತಿಪರರ ನೋಂದಣಿಯಲ್ಲಿ ವಿಫಲಗೊಂಡಿದ್ದು, ನೋಂದಣಿ ಕಡ್ಡಾಯವಾಗಿದ್ದರೂ ಎಪ್ರಿಲ್ ವೇಳೆಗೆ ಕೇವಲ ಶೇ.1ಕ್ಕಿಂತ ಕಡಿಮೆ ವೈದ್ಯರಿಂದ ನೋಂದಣಿ ಅರ್ಜಿಗಳನ್ನು ಪೋರ್ಟಲ್ ಸ್ವೀಕರಿಸಿತ್ತು.
ಪೋರ್ಟಲ್ನಲ್ಲಿ ವೈದ್ಯರನ್ನು ದಾಖಲಿಸುವ ಪ್ರಕ್ರಿಯೆಯಲ್ಲಿ ಹಲವಾರು ಅಡೆತಡೆಗಳು ಎದುರಾದ ಬಳಿಕ ಈಗ ಕೇಂದ್ರ ಆರೋಗ್ಯ ಸಚಿವಾಲಯವು ನೋಂದಣಿಯು ಸ್ವಯಂಪ್ರೇರಿತವಾಗಿದೆ ಎಂದು ಪ್ರಕಟಿಸಿದೆ.
ಸಹಾಯಕ ಆರೋಗ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರು ಆ.8ರಂದು ಲೋಕಸಭೆಯಲ್ಲಿ ಎಸ್ಪಿ ಸಂಸದ ಆದಿತ್ಯ ಯಾದವ್ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ, ಎನ್ಎಂಆರ್ನಿಂದ ಗುರುತಿನ ಚೀಟಿ ಪಡೆಯಲು ಅರ್ಜಿ ಸಲ್ಲಿಸುವುದು ಸ್ವಯಂಪ್ರೇರಿತವಾಗಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್ಎಂಸಿ)ಯು ತಿಳಿಸಿದೆ ಎಂದು ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕೇರಳದ ಆರ್ಟಿಐ ಕಾರ್ಯಕರ್ತ ಡಾ.ಕೆ.ವಿ.ಬಾಬು ಅವರು ಎನ್ಎಂಆರ್ ನಲ್ಲಿ ನೋಂದಣಿ ಸ್ವಯಂಪ್ರೇರಿತವಾಗಿದ್ದರೆ ಅದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು. ನೋಂದಣಿ ಪ್ರಕ್ರಿಯೆಯಲ್ಲಿ ಹಲವಾರು ಅಡತಡೆಗಳನ್ನು ಎದುರಿಸಿದ ಬಳಿಕ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಆರ್ಟಿಐ ಅರ್ಜಿಗಳನ್ನು ಸಲ್ಲಿಸಿದ್ದರು.
ಆದರೆ, ನೋಂದಣಿಯನ್ನು ಸ್ವಯಂಪ್ರೇರಿತಗೊಳಿಸಿರುವುದು ಒಂದು ವರ್ಷದಲ್ಲಿ ಕೇವಲ 996 ವೈದ್ಯರನ್ನು ನೋಂದಾಯಿಸಿಕೊಳ್ಳುವ ಮೂಲಕ ಇಡೀ ಪ್ರಕ್ರಿಯೆಯನ್ನೇ ಅವ್ಯವಸ್ಥೆಗೊಳಿಸಿದ್ದಕ್ಕಾಗಿ ಎನ್ ಎಂ ಸಿ ಯನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸುವುದಿಲ್ಲ ಎಂದು ಡಾ.ಬಾಬು ಹೇಳಿದರು.







