ಕೇರಳ ಪೊಲೀಸರಿಗೆ ಶರಣಾದ ಕರ್ನಾಟಕದ ನಕ್ಸಲ್ ಸುರೇಶ್
ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ಮಾವೋವಾದಿ
ಕಣ್ಣೂರು: ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್ ಆಲಿಯಾಸ್ ಪ್ರದೀಪ್ ಕಣ್ಣೂರಿನಲ್ಲಿ ರವಿವಾರ ಕೇರಳ ಪೊಲೀಸರಿಗೆ ಶರಣಾಗಿದ್ದಾರೆ.
ಇತ್ತೀಚೆಗೆ ಕೇರಳ-ಕರ್ನಾಟಕ ಗಡಿಯ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರ ತಂಡದೊಂದಿಗೆ ಸಂಚರಿಸುತ್ತಿದ್ದಾಗ ಸುರಾಶ್ ಕಾಡಾನೆ ದಾಳಿಗೆ ತುತ್ತಾಗಿದ್ದರು. ಇದರಿಂದ ಗಂಭೀರ ಗಾಯಗೊಂಡಿದ್ದ ಅವರನ್ನು ಆರು ಜನರಿದ್ದ ನಕ್ಸಲೀಯರ ತಂಡ ಇದೇ ಪ್ರದೇಶದ ಕಂಜಿರಕೊಲ್ಲಿ ಚಿತ್ತಾರಿ ಕಾಲನಿಯಲ್ಲಿ ಬಿಟ್ಟು ಹೋಗಿತ್ತು.
ಈ ಬಗ್ಗೆ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತವಾದ ಪೊಲೀಸರು ಅಲ್ಲಿಗೆ ಧಾವಿಸಿ ಗಾಯಗೊಂಡ ಸುರೇಶ್ ನನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಿದ್ದರು.
ಈ ಬಗ್ಗೆ ಮಾಹಿತಿ ನೀಡಿದ್ದ ಪೊಲೀಸರು, ‘‘ಮಾವೋವಾದಿಗಳು ಗಾಯಗೊಂಡ ಸುರೇಶನನ್ನು ಇಲ್ಲಿಯ ಮನೆಯೊಂದರಲ್ಲಿ ಬಿಟ್ಟಿದ್ದರು. ಅನಂತರ ಅಲ್ಲಿಂದ ಅಕ್ಕಿ ಹಾಗೂ ಅಗತ್ಯದ ವಸ್ತುಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದರು’’ ಎಂದು ತಿಳಿಸಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಪೊಲೀಸರಿಗೆ ಶರಣಾಗುವ ಸಂದರ್ಭ ಗಾಲಿಖುರ್ಚಿಯಲ್ಲಿ ಕುಳಿತು ಮಾಧ್ಯಮದವರೊಂದಿಗೆ ಮಾತನಾಡಿದ ಸುರೇಶ್, ತಾನು ಬಹು ಕಾಲದ ಹಿಂದೆಯೇ ಶರಣಾಗಲು ಬಯಸಿದ್ದೆ ಎಂದು ಹೇಳಿದ್ದಾರೆ.
‘‘ನಾನು ಕಳೆದ 23 ವರ್ಷಗಳಿಂದ ಮಾವೋವಾದಿಯಾಗಿದ್ದೆ. ಬಹು ದೀರ್ಘ ಕಾಲದಿಂದ ಶರಣಾಗಲು ಬಯಸಿದ್ದೆ. ಈಗ ಶರಣಾಗುತ್ತಿದ್ದೇನೆ. ಮಾವೋವಾದಿಯಾದ ಬಳಿಕವೂ ನನಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಹಲವು ವರ್ಷಗಳ ಬಳಿಕವೂ ನಮಗೆ ಕೇರಳ, ತಮಿಳುನಾಡು ಅಥವಾ ಕರ್ನಾಟಕದಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಾಗಲಿಲ್ಲ’’ ಎಂದು ಅವರು ಹೇಳಿದ್ದಾರೆ.







