ಪ್ರಧಾನಿಗೆ ನಾಝಿ ನಾಯಕ ಗೋಬೆಲ್ ಸ್ಫೂರ್ತಿ: ಜೈರಾಮ್ ರಮೇಶ್
ಜೈರಾಮ್ ರಮೇಶ್ | PC : PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಾಜಿ ಪ್ರಚಾರಕ ಜೋಸೆಫ್ ಗೋಬೆಲ್ಸ್ರಿಂದ ಸ್ಫೂರ್ತಿ ಪಡೆದು ಕಾಂಗ್ರೆಸ್ ಪ್ರಣಾಳಿಕೆ ‘ನ್ಯಾಯ ಪತ್ರ’ದ ಕುರಿತು ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸೋಮವಾರ ಆರೋಪಿಸಿದ್ದಾರೆ.
ಜೋಸೆಫ್ ಗೋಬೆಲ್ಸ್ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ನ ಪ್ರಚಾರ ಸಚಿವ.
‘ಎಂಟಾಯರ್ ಪೊಲಿಟಿಕಲ್ ಸಯನ್ಸ್’ನಲ್ಲಿ ಸ್ನಾತಕೋತ್ತರ ಪದವಿ ಕಲಿಯುವಾಗ ನರೇಂದ್ರ ಮೋದಿ ಅವರು ಪ್ರಚಾರ ಮೌಲ್ಯದ ಕುರಿತು ಜೋಸೆಫ್ ಗೋಬೆಲ್ಸ್ ಅವರನ್ನು ಖಂಡಿತವಾಗಿ ಓದಿರುತ್ತಾರೆ ಹಾಗೂ ಅವರಿಂದ ಸ್ಫೂರ್ತಿ ಪಡೆದುಕೊಂಡಿರುತ್ತಾರೆ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
‘‘ನೀವು ಅತಿ ದೊಡ್ಡ ಸುಳ್ಳೊಂದು ಹೇಳಿ, ಅದೇ ಸುಳ್ಳನ್ನು ಪುನಾರಾವರ್ತಿಸಿದರೆ, ಜನರು ಅಂತಿಮವಾಗಿ ಅದನ್ನು ನಂಬುತ್ತಾರೆ’’ ಎಂದು ಗೋಬೆಲ್ಸ್ ಅವರನ್ನು ಉಲ್ಲೇಖಿಸಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
‘‘ಇತ್ತೀಚೆಗಿನ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ನ ನ್ಯಾಯ ಪತ್ರದ ಬಗ್ಗೆ ನಿರ್ಲಜ್ಜವಾಗಿ, ನಾಚಿಕೆಯಿಲ್ಲದೆ ಸುಳ್ಳು ಹೇಳಿದ್ದಾರೆ. ಇದು ಪ್ರಧಾನಿ ಅವರದ್ದು ಅಸತ್ಯಮೇವ ಜಯತೇಯೇ ಧ್ಯೇಯವೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಪ್ರತಿ ಬಾರಿ ಅವರು ಮಾತನಾಡುವಾಗ ಸತ್ಯವನ್ನು ಕೊಲ್ಲುತ್ತಾರೆ’’ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.