ಮರಾಠ ಮೀಸಲಾತಿ ಹೋರಾಟಗಾರರಿಂದ ಎನ್ಸಿಪಿ ಶಾಸಕನ ಮನೆಗೆ ಬೆಂಕಿ

Screengrab:x/@NewsArenaIndia
ಹೊಸದಿಲ್ಲಿ: ಮರಾಠರ ಮೀಸಲಾತಿ ವಿಚಾರದ ಹಿನ್ನೆಲೆಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಸೋಮವಾರ ಪ್ರತಿಭಟನಾಕಾರರು ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿರುವ ಎನ್ಸಿಪಿ ಶಾಸಕ ಪ್ರಕಾಶ್ ಸೋಳಂಕೆ ಅವರ ನಿವಾಸಕ್ಕೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ.
ಮೀಸಲಾತಿ ಪರ ಹೋರಾಟಗಾರ ಮನೋಜ್ ಪಾಟೀಲ್ ಅವರ ಉಪವಾಸ ಸತ್ಯಾಗ್ರದ ಕುರಿತಂತೆ ಸೋಳಂಕೆ ಅವರು ನೀಡಿದ ಹೇಳಿಕೆಯಿಂದ ಆಕ್ರೋಶಿತರಾಗಿ ಪ್ರತಿಭಟನಾಕಾರರು ಅವರ ಮನೆಗೆ ಕಲ್ಲೆಸೆದು ಬೆಂಕಿ ಹಚ್ಚಿ ಹೊರಗೆ ನಿಲ್ಲಿಸಿದ್ದ ವಾಹನಗಳಿಗೂ ಹಾನಿಯೆಸಗಿದ್ದಾರೆ.
“ಘಟನೆಯಲ್ಲಿ ಕುಟುಂಬ ಸದಸ್ಯರು ಅಥವಾ ಸಿಬ್ಬಂದಿಗೆ ಗಾಯಗಳುಂಟಾಗಿಲ್ಲ. ನಾವು ಸುರಕ್ಷಿತವಾಗಿದ್ದೇವೆ, ಆದರೆ ಆಸ್ತಿಪಾಸ್ತಿಗೆ ಅಪಾರ ಹಾನಿಯಾಗಿದೆ,” ಎಂದು ಶಾಸಕರು ಹೇಳಿದ್ದಾರೆ. ಶಾಸಕರ ಮನೆಗೆ ಬೆಂಕಿ ಹೊತ್ತಿಕೊಂಡಿರುವುದು ಮತ್ತು ಸುತ್ತಲೂ ದಟ್ಟ ಹೊಗೆ ಹರಡಿರುವುದು ಕಾಣಿಸುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ, “ರಾಜ್ಯದ ಟ್ರಿಪಲ್ ಇಂಜಿನ್ ಸರ್ಕಾರದ ವೈಫಲ್ಯತೆಗೆ ಸಾಕ್ಷಿಯೆಂಬಂತೆ ಶಾಸಕರೊಬ್ಬರ ಮನೆಗೆ ಬೆಂಕಿ ಹಚ್ಚಲಾಗಿದೆ… ಗೃಹ ಸಚಿವರೇನು ಮಾಡುತ್ತಿದ್ದಾರೆ? ಇದಕ್ಕೆ ಅವರು ಹೊಣೆ,” ಎಂದರು.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರತಿಕ್ರಿಯಿಸಿ, “ಮನೋಜ್ ಜೈರಂಗೆ ಪಾಟೀಲ್ (ಮರಾಠ ಮೀಸಲಾತಿ ಹೋರಾಟಗಾರ) ತಮ್ಮ ಪ್ರತಿಭಟನೆ ಯಾವ ತಿರುವು ಪಡೆಯುತ್ತಿದೆ ಎಂದು ನೋಡಬೇಕು… ಅದು ತಪ್ಪಾದ ಹಾದಿಯಲ್ಲಿ ಸಾಗುತ್ತಿದೆ,” ಎಂದರು.
ಮರಾಠ ಮೀಸಲಾತಿ ಕುರಿತು ಏನು ಮಾಡಬಹುದು ಎಂದು ಪರಾಮರ್ಶಿಸಲು ಮಹಾರಾಷ್ಟ್ರ ಸರ್ಕಾರ ಸಲಹಾ ಮಂಡಳಿ ರಚಿಸಿದ ಬೆನ್ನಲ್ಲೇ ಇಂದಿನ ಹಿಂಸಾಚಾರ ನಡೆದಿದೆ.
NCP(Ajit) MLA Prakash Solanke’s house burned by Maratha Reservation protesters.Solanke & his family members were in the house when incident took place. pic.twitter.com/UhhXJ7dMML
— News Arena India (@NewsArenaIndia) October 30, 2023







