ಬಿಹಾರ ಜಾತಿ ಗಣತಿ ಸಮೀಕ್ಷೆ ನಕಲಿ ಎಂಬ ಹೇಳಿಕೆ ನೀಡಿದ ರಾಹುಲ್ ಗಾಂಧಿ ವಿರುದ್ಧ NDA ವಾಗ್ದಾಳಿ

ರಾಹುಲ್ ಗಾಂಧಿ | PC : PTI
ಪಾಟ್ನಾ: ಬಿಹಾರ ರಾಜ್ಯದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರಕಾರವು ನಡೆಸಿರುವ ಜಾತಿ ಸಮೀಕ್ಷೆ ನಕಲಿ ಎಂಬ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ರವಿವಾರ ಬಿಹಾರದಲ್ಲಿನ ಆಡಳಿತಾರೂಢ ಎನ್ಡಿಎ ವಾಗ್ದಾಳಿ ನಡೆಸಿದೆ.
ಲೋಕಸಭಾ ಚುನಾವಣೆಯ ನಂತರ ಶನಿವಾರ ಇದೇ ಪ್ರಥಮ ಬಾರಿಗೆ ಬಿಹಾರ ಪ್ರವಾಸ ಕೈಗೊಂಡಿದ್ದ ರಾಹುಲ್ ಗಾಂಧಿ, ತಮ್ಮ ಪ್ರವಾಸದ ವೇಳೆ ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸಲಾಗುವುದು ಎಂದು ಒತ್ತಿ ಹೇಳಿದ್ದರಲ್ಲದೆ, 2022-23ರಲ್ಲಿ ಬಿಹಾರದಲ್ಲಿ ನಡೆದಿದ್ದ ನಕಲಿ ಹಾಗೂ ಜನರನ್ನು ಮೂರ್ಖರನ್ನಾಗಿಸುವಂತಹ ಜಾತಿ ಗಣತಿಯಂತಲ್ಲದೆ ಇಡೀ ಪ್ರಕ್ರಿಯೆ ಪ್ರಾಮಾಣಿಕವಾಗಿರುವಂತೆ ನೋಡಿಕೊಳ್ಳಲಾಗುವುದು ಎಂದು ಶಪಥ ಮಾಡಿದ್ದರು.
ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರ್ಜೆಡಿಯ ರಾಜ್ಯ ಸಚಿವ ವಿಜಯ್ ಕುಮಾರ್ ಚೌಧರಿ, “ಭಾರತ ಸರಕಾರ ಮತ್ತು ಭಾರತ ಪ್ರಭುತ್ವದ ನಡುವೆ ವ್ಯತ್ಯಾಸ ಅರಿಯದ ರಾಜಕಾರಣಿಯಿಂದ ನಾವೇನೂ ನಿರೀಕ್ಷಿಸಲು ಸಾಧ್ಯವಿಲ್ಲ” ಎಂದು ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ದಿಲ್ಲಿಯಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಬಿಜೆಪಿ ಆಡಳಿತಾರೂಢ ಅಸ್ಸಾಂನಲ್ಲಿ ದಾಖಲಾಗಿರುವ ಎಫ್ಐಆರ್ ಕುರಿತು ಅವರು ಮೇಲಿನಂತೆ ಹೇಳಿಕೆ ನೀಡಿದ್ದಾರೆ.
“ಕಾಂಗ್ರೆಸ್ ಪಕ್ಷವು ಮೊದಲಿನಿಂದಲೂ ಜಾತಿ ಸಮೀಕ್ಷೆಯನ್ನು ಬೆಂಬಲಿಸುತ್ತಾ ಬಂದಿದೆ. ಸೂಕ್ತ ಪುರಾವೆಗಳೊಂದಿಗೆ ಈ ವಿಷಯವನ್ನು ಸಾಬೀತು ಪಡಿಸಿದರೆ, ಸರಕಾರವು ಸೂಕ್ತವಾಗಿ ತಿದ್ದುಪಡಿ ಮಾಡುವುದು. ಈ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿಯ ಹೇಳಿಕೆಯು ಅವರ ಮಾತುಗಳು ಹಾಸ್ಯಾಸ್ಪದವಾಗಿರುವುದಕ್ಕೆ ಮತ್ತೊಂದು ನಿದರ್ಶನವಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.
ಸಚಿವ ವಿಜಯ್ ಕುಮಾರ್ ಚೌಧರಿಯಲ್ಲದೆ, ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸೈಯದ್ ಶಹನವಾಝ್ ಹುಸೈನ್, ರಾಜ್ಯ ಸಚಿವ ದಿಲೀಪ್ ಜೈಸ್ವಾಲ್ ಕೂಡಾ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿದ್ದಾರೆ.







