ಯಾರಾಗಲಿದ್ದಾರೆ ಉಪರಾಷ್ಟ್ರಪತಿ?
ಬಿಹಾರ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಎನ್‌ಡಿಎ
ಹೊಸದಿಲ್ಲಿ: ಜಗದೀಪ್ ಧನ್ಕರ್ ರಾಜೀನಾಮೆಯ ಬಳಿಕ, ಅವರ ಉತ್ತರಾಧಿಕಾರಿಯನ್ನು ಅರಸುವ ಸ್ಪರ್ಧೆ ಬಿರುಸುಗೊಂಡಿದೆ. ಆಡಳಿತಾರೂಢ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಉಪರಾಷ್ಟ್ರಪತಿ ಹುದ್ದೆಗೆ ಹಿಂದುಳಿದ ಸಮುದಾಯಗಳ ಅಭ್ಯರ್ಥಿಯೊಬ್ಬನನ್ನು ಪರಿಗಣಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಎನ್‌ಡಿಎಯ ಉಪರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗಳಲ್ಲಿ, ಹಾಲಿ ಸಹಾಯಕ ಕೃಷಿ ಸಚಿವ ರಾಮ್‌ನಾಥ್ ಠಾಕೂರ್ ಮುಂಚೂಣಿಯಲ್ಲಿದ್ದಾರೆ. ಅವರು ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಭಾರತ ರತ್ನ ಪ್ರಶಸ್ತಿ ವಿಜೇತ ಕರ್ಪೂರಿ ಠಾಕೂರ್ ರ ಮಗನಾಗಿದ್ದಾರೆ. ಅವರು ನೈ (ಕ್ಷೌರಿಕ) ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯವನ್ನು ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಉಪರಾಷ್ಟ್ರಪತಿ ಹುದ್ದೆಗೆ ಅವರ ಆಯ್ಕೆಯು ರಾಜಕೀಯ ಮಹತ್ವವನ್ನು ಹೊಂದಿದೆ.
ಸ್ಪರ್ಧೆಯಲ್ಲಿರುವ ಇನ್ನೋರ್ವ ಅಭ್ಯರ್ಥಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಕೇರಳದ ಮಾಜಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್, ಕೇಂದ್ರದ ಮಾಜಿ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ರಾಜ್ಯಸಭೆಯ ಉಪಸಭಾಪತಿ ಹರಿವಂಶ ನಾರಾಯಣ್ ಸಿಂಗ್ ಅವರೂ ಸ್ಪರ್ಧೆಯಲ್ಲಿದ್ದಾರೆ.





