ಬಿಹಾರ ಚುನಾವಣೆ | ಎನ್ಡಿಎ ಮೈತ್ರಿಕೂಟದ ಪ್ರಣಾಳಿಕೆ ಬಿಡುಗಡೆ : 1 ಕೋಟಿ ಉದ್ಯೋಗ, ಉಚಿತ ಶಿಕ್ಷಣದ ಭರವಸೆ

Photo credit: indiatoday.in
ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ಎನ್ಡಿಎ ಮೈತ್ರಿಕೂಟ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಒಂದು ಕೋಟಿ ಯುವಕರಿಗೆ ಉದ್ಯೋಗ, ಐದು ವರ್ಷಗಳಲ್ಲಿ 50 ಲಕ್ಷ ಕೋಟಿ ರೂ. ಹೂಡಿಕೆ ಮತ್ತು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಜಾಗತಿಕ ಕೌಶಲ್ಯ ಕೇಂದ್ರಗಳ ಸ್ಥಾಪನೆಯ ಭರವಸೆ ನೀಡಲಾಗಿದೆ.
ಸಂಕಲ್ಪ ಪತ್ರ ಎಂದು ಕರೆಯಲ್ಪಡುವ ಎನ್ಡಿಎ ಪ್ರಣಾಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿ(ಯು) ನಾಯಕ ನಿತೀಶ್ ಕುಮಾರ್, ಎಚ್ಎಎಂ(ಎಸ್) ನಾಯಕ ಜಿತನ್ ರಾಮ್ ಮಾಂಝಿ, ಎಲ್ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಮತ್ತು ಆರ್ಎಲ್ಎಂ ನಾಯಕ ಉಪೇಂದ್ರ ಕುಶ್ವಾಹ ಪಾಟ್ನಾದಲ್ಲಿ ಬಿಡುಗಡೆ ಮಾಡಿದರು.
ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ಪ್ರಕಾರ, ಎನ್ಡಿಎ ಪ್ರಣಾಳಿಕೆಯು ಒಂದು ಕೋಟಿ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡುತ್ತದೆ. ರಾಜ್ಯದ ಒಂದು ಕೋಟಿ ಮಹಿಳೆಯರಿಗೆ 'ಲಖ್ಪತಿ ದೀದಿ' ಯೋಜನೆಯ ಪ್ರಯೋಜನವನ್ನು ನೀಡಲಾಗುವುದು. ರಾಜ್ಯಾದ್ಯಂತ ಏಳು ಎಕ್ಸ್ ಪ್ರೆಸ್ ವೇಗಳನ್ನು ನಿರ್ಮಿಸಲಾಗುವುದು. ಪಾಟ್ನಾ ಸೇರಿದಂತೆ ರಾಜ್ಯದ ನಾಲ್ಕು ನಗರಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ಪರಿಚಯಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಐದು ವರ್ಷಗಳಲ್ಲಿ 50 ಲಕ್ಷ ಕೋಟಿ ರೂ. ಹೂಡಿಕೆ, ಎಲ್ಕೆಜಿಯಿಂದ ಪಿಜಿವರೆಗೆ ಉಚಿತ ಗುಣಮಟ್ಟದ ಶಿಕ್ಷಣದ ಭರವಸೆಯನ್ನು ಕೂಡ ಪ್ರಣಾಳಿಕೆಯಲ್ಲಿ ನೀಡಲಾಗಿದೆ.
ಬಿಹಾರದಲ್ಲಿ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ನವೆಂಬರ್ 14 ರಂದು ಪ್ರಕಟವಾಗಲಿದೆ.







