ಬಿಹಾರ ಚುನಾವಣಾ ಫಲಿತಾಂಶ : ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೇಲುಗೈ

Photo credit: PTI
ಹೊಸದಿಲ್ಲಿ: ಬಿಹಾರ ವಿಧಾನಸಭಾ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದೆ. ಮುಸ್ಲಿಂ ಪ್ರಾಬಲ್ಯದ ಹಲವು ಕ್ಷೇತ್ರಗಳಲ್ಲಿ ಎನ್ ಡಿಎ ಅಭ್ಯರ್ಥಿಗಳು ಗಮನಾರ್ಹ ಮತಗಳನ್ನು ಪಡೆದಿರುವುದು ಕಂಡು ಬಂದಿದೆ.
ಈಗಿನ ಫಲಿತಾಂಶಗಳನ್ನು ಗಮನಿಸಿದಾಗ ಎನ್ಡಿಎ ಕನಿಷ್ಠ 16 ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಗೆಲುವಿನ ಹಾದಿಯಲ್ಲಿದೆ. ನಿತೀಶ್ ಕುಮಾರ್ ಅವರ ಜೆಡಿಯು ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಹೆಚ್ಚಿನ ಲಾಭವನ್ನು ಪಡೆದಿದೆ. 2020ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಸುಮಾರು ಎಂಟು ಸ್ಥಾನಗಳನ್ನು ಹೆಚ್ಚಾಗಿ ಗೆದ್ದುಕೊಂಡಿದೆ.
ಇದಲ್ಲದೆ ಚಿರಾಗ್ ಪಾಸ್ವಾನ್ ಅವರ ಎಲ್ಜೆಪಿ ಮುಸ್ಲಿಂ ಪ್ರಾಬಲ್ಯದ ಆರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಉದ್ಯೋಗ ಮತ್ತು ಹೊಸ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಭಾರೀ ಪ್ರಚಾರ ನಡೆಸಿದರೂ ಮಹಾಘಟಬಂಧನ್ ಗೆ ಯಾವುದೇ ಪ್ರಯೋಜನವಾಗಿಲ್ಲ.
ಇತ್ತೀಚಿನ ಟ್ರೆಂಡ್ಗಳ ಪ್ರಕಾರ, ಆರ್ಜೆಡಿ 2020ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದುಕೊಂಡಿದ್ದ ಕನಿಷ್ಠ 7 ಮುಸ್ಲಿಂ ಪ್ರಾಬಲ್ಯದ ಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಈ ಹಿಂದೆ ಗೆದ್ದಿದ್ದ ನಾಲ್ಕು ಸ್ಥಾನಗಳಲ್ಲಿ ಹಿಂದುಳಿದಿದೆ. 2020ರಲ್ಲಿ, ಆರ್ಜೆಡಿ ಇಂತಹ 18 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿತ್ತು. ಕಾಂಗ್ರೆಸ್ ಆರು ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿತ್ತು.
ಈ ಹಿಂದೆ ಮುಸ್ಲಿಮರು ಜಾತ್ಯತೀತ ಪಕ್ಷಗಳ ಮೈತ್ರಿಗಳನ್ನು ಬೆಂಬಲಿಸಿದ್ದಾರೆ. 2022ರ ಬಿಹಾರ ಸಮೀಕ್ಷೆಯು ಮುಸ್ಲಿಮರು ಜನಸಂಖ್ಯೆಯ 17.7% ರಷ್ಟಿದ್ದಾರೆ ಎಂಬುದನ್ನು ತಿಳಿಸಿದೆ. 2015ರಲ್ಲಿ ಸುಮಾರು 80% ಮುಸ್ಲಿಂ ಮತಗಳು ಮತ್ತು 2020ರಲ್ಲಿ 77% ಮತಗಳು ಮಹಾಘಟಬಂಧನ್ ಗೆ ಹೋಗಿವೆ ಎನ್ನುವುದು ಅಂಕಿ ಅಂಶಗಳಲ್ಲಿ ಬಯಲಾಗಿದೆ.







