ಬಿಹಾರದಲ್ಲಿ ಎನ್ಡಿಎ ಗೆದ್ದಿದ್ದು ಹೇಗೆ?

Photo Credit : PTI
ಹೊಸದಿಲ್ಲಿ, ನ. 14: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್ಡಿಎ) ಐತಿಹಾಸಿಕ ಗೆಲುವು ಸಾಧಿಸಿದೆ. 243 ಸದಸ್ಯ ಬಲದ ವಿಧಾನಸಭೆಯಲ್ಲಿ ಅದು 208 ಸ್ಥಾನಗಳನ್ನು ಗೆದ್ದಿದೆ.
ಈ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಮಹಿಳೆಯರು ಮತ್ತು ಯುವ ಮತದಾರರು ಎನ್ಡಿಎ ಪರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆಂದು ಭಾವಿಸಲಾಗಿದೆ.
ಎನ್ಡಿಎ ಅಭೂತಪೂರ್ವ ಯಶಸ್ಸಿಗೆ ಸ್ಥೂಲವಾಗಿ ಐದು ಕಾರಣಗಳನ್ನು ಪಟ್ಟಿ ಮಾಡಲಾಗಿದೆ.
►ಸಮರ್ಪಕ ಸ್ಥಾನ ಹಂಚಿಕೆ: ಸ್ಥಾನ ಹೊಂದಾಣಿಕೆಯು ಬಹುತೇಕ ಸೌಹಾರ್ದ ರೀತಿಯಲ್ಲಿ ನಡೆದಿದೆ. ಎನ್ಡಿಎಯ ಘಟಕ ಪಕ್ಷಗಳ ನಡುವೆ ಎಲ್ಲಿಯೂ ಸ್ಪರ್ಧೆ ಏರ್ಪಡದಂತೆ ನೋಡಿಕೊಳ್ಳಲಾಗಿದೆ.
►‘ಜಂಗಲ್ ರಾಜ್’ ಗುಮ್ಮ: ಬಿಹಾರದಲ್ಲಿ, ಬಿಜೆಪಿ ನೇತೃತ್ವದ ಎನ್ಡಿಎ ತನ್ನ ಪ್ರಚಾರದ ವೇಳೆ ‘ಜಂಗಲ್ ರಾಜ್’ ಮತ್ತೆ ಬರಬಹುದು ಎಂಬ ಬೆದರಿಕೆಯನ್ನು ಜನರಲ್ಲಿ ಹುಟ್ಟಿಸುವಲ್ಲಿ ಯಶಸ್ವಿಯಾಯಿತು. ಆರ್ಜೆಡಿಯೊಂದಿಗೆ ಗುರುತಿಸಿಕೊಂಡ ಗೂಂಡಾಗಳು ಉಪಮುಖ್ಯಮಂತ್ರಿ ವಿಜಯಕುಮಾರ್ ಸಿನ್ಹಾರ ವಾಹನಗಳ ಸಾಲಿನ ಮೇಲೆ ನಡೆಸಿದ್ದಾರೆನ್ನಲಾದ ದಾಳಿಯನ್ನು ತನ್ನ ಲಾಭಕ್ಕೆ ಬಳಸುವಲ್ಲಿ ಎನ್ಡಿಎ ಯಶಸ್ವಿಯಾಯಿತು.
►ಜಾತಿ ಸಮೀಕರಣದ ವಿಸ್ತರಣೆ: ಎನ್ಡಿಎ ಭವ್ಯ ಗೆಲುವಿಗೆ ಮುಖ್ಯ ಕಾರಣಗಳಲ್ಲಿ ಒಂದು ಜಾತಿ ಸಮಿಕರಣದ ವಿಸ್ತರಣೆ. ಹಿಂದೆ, ಬಿಹಾರ ರಾಜಕಾರಣ ನಡೆಯುತ್ತಾ ಬಂದಿದ್ದು ಮುಸ್ಲಿಮ್-ಯಾದವ್ ಸಮೀಕರಣದಲ್ಲಿ. ಅದರಿಂದ ಆರ್ಜೆಡಿ ಪ್ರಯೋಜನ ಪಡೆದಿತ್ತು. ಆದರೆ, 2025ರಲ್ಲಿ, ಮಹಿಳಾ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ (ಇಬಿಸಿ)ಗಳ ಸಮ್ಮಿಲನವು ಮುನ್ನೆಲೆಗೆ ಬಂತು. ಅದರ ಲಾಭವನ್ನು ಎನ್ಡಿಎ ಪಡೆಯಿತು.
►ಮಹಿಳೆಯರು: ಎನ್ಡಿಎಯ ಬೃಹತ್ ವಿಜಯದಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಸುಮಾರು ಒಂದೂವರೆ ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 10,000 ರೂ. ನಗದು ವರ್ಗಾವಣೆ ಮಾಡಿರುವುದು ಈ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಹೆಚ್ಚಿನ ಜಿಲ್ಲೆಗಳಲ್ಲಿ ಮಹಿಳೆಯರ ಮತದಾನವು ಪುರುಷರಿಗಿಂತ10-20 ಶೇಕಡದಷ್ಟು ಹೆಚ್ಚಾಗಿತ್ತು.
►14 ಲಕ್ಷ ಹೊಸ ಮತದಾರರ ಸೇರ್ಪಡೆ: 14 ಲಕ್ಷ ಹೊಸ ಮತದಾರರ ಸೇರ್ಪಡೆಯು ಎನ್ಡಿಎಯ ಮತನೆಲೆಯನ್ನು ವಿಸ್ತರಿಸಿತು. ಹೊಸ ಮತದಾರರ ಪೈಕಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.







