ಎಐ-ಆಧಾರಿತ ಹೊಸ ಮಾಧ್ಯಮ ಸಂಸ್ಥೆ ʼಡಿಕೋಡರ್ʼ ಘೋಷಿಸಿದ ಎನ್‌ಡಿಟಿವಿ ಸ್ಥಾಪಕ ಪ್ರಣಯ್ ರಾಯ್

ಹೊಸದಿಲ್ಲಿ: ಎನ್‌ಡಿಟಿವಿ ಸ್ಥಾಪಕರಾದ ಪ್ರಣಯ್ ರಾಯ್ ಅವರು ತಮ್ಮ ಹೊಸ ಮಾಧ್ಯಮ ಸಂಸ್ಥೆ ʼಡಿಕೋಡರ್ʼ (deKoder) ಅನ್ನು ಘೋಷಿಸಿದ್ದಾರೆ. ಈ ಸಂಸ್ಥೆಯು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಚುನಾವಣಾ ವಿಶ್ಲೇಷಣೆಗಳು ಮತ್ತು ಜಾಗತಿಕ ವಿಚಾರಗಳ ಕುರಿತು ಒಳನೋಟಗಳನ್ನು ಒದಗಿಸುವ ಉದ್ದೇಶ ಹೊಂದಿದೆ.
ʼಡಿಕೋಡರ್ʼ ಒಂದು ಎಐ-ಆಧಾರಿತ ವೆಬ್‌ಸೈಟ್ ಮತ್ತು ಆ್ಯಪ್ ಆಗಿದ್ದು ಚುನಾವಣಾ ವಿಶ್ಲೇಷಣೆಗಳು ಮತ್ತು ಪ್ರಮುಖ ಜಾಗತಿಕ ಘಟನೆಗಳನ್ನು ಒಳಗೊಂಡಂತೆ ಸಂಕೀರ್ಣ ಜಾಗತಿಕ ವಿಚಾರಗಳನ್ನು ಸರಳಗೊಳಿಸಲು ಇವುಗಳನ್ನು ವಿನ್ಯಾಸಗೊಳಿಸಲಾಗಿದೆ.
ಮಾಹಿತಿ ಹೆಚ್ಚು ಜನರಿಗೆ ತಲುಪುವಂತಾಗಲು ʼಡಿಕೋಡರ್ʼ ವಿಷಯಗಳನ್ನು 15 ಭಿನ್ನ ಭಾರತೀಯ ಭಾಷೆಗಳಲ್ಲಿ ಒದಗಿಸುವ ಉದ್ದೇಶ ಹೊಂದಿದೆ. ವೀಕ್ಷಕರಿಗೆ ಸ್ವತಂತ್ರವಾಗಿ ವಿಶ್ಲೇಷಣೆ ನಡೆಸಲು ಅನುವು ಮಾಡಿಕೊಡಲು ಕೃತಕ ಬುದ್ಧಿಮತ್ತೆಯನ್ನು ಡಿಕೋಡರ್ ಒಳಗೊಂಡಿದೆ.
ರಾಯ್ ಅವರು ನವೆಂಬರ್ 30, 2022ರಂದು ಎನ್‌ಡಿಟಿವಿ ನಿರ್ದೇಶಕರ ಮಂಡಳಿಗೆ ರಾಜೀನಾಮೆ ನೀಡಿದ್ದರು. ಎನ್‌ಡಿಟಿವಿಯ ಪ್ರವರ್ತಕ ಸಮೂಹ ಸಂಸ್ಥೆಯಾದ ಆರ್‌ಆರ್‌ಪಿಆರ್ ಹೋಲ್ಡಿಂಗ್, ಎನ್‌ಡಿಟಿವಿಯಲ್ಲಿ ಶೇ 29.18 ಪಾಲನ್ನು ಹೊಂದಿತ್ತು, ಇದನ್ನು ಉದ್ಯಮಿ ಗೌತಮ್ ಅದಾನಿ ಒಡೆತನದ ಅದಾನಿ ಸಮೂಹವು ಸ್ವಾಧೀನಪಡಿಸಿಕೊಂಡ ನಂತರದ ಬೆಳವಣಿಗೆ ಇದಾಗಿತ್ತು. ನಂತರ ಎನ್‌ಡಿಟಿವಿಯಲ್ಲಿ ತಮ್ಮ ಬಳಿ ಇದ್ದ ಶೇ 27.26 ಷೇರುಗಳನ್ನು ಅವರು ಅದಾನಿ ಸಮೂಹಕ್ಕೆ ಮಾರಾಟ ಮಾಡಿದ್ದರು.







