ಐದು ವರ್ಷಕ್ಕಿಂತ ಕೆಳಗಿನ ಶೇ.37ರಷ್ಟು ಮಕ್ಕಳು ಕುಬ್ಜತೆಯಿಂದ ಬಳಲುತ್ತಿದ್ದಾರೆ: ಸರಕಾರ

ಸಾಂದರ್ಭಿಕ ಚಿತ್ರ (credit: miracleshealth.com)
ಹೊಸದಿಲ್ಲಿ: ಅಧಿಕೃತ ದತ್ತಾಂಶಗಳ ಪ್ರಕಾರ ಪೋಷಣ ಟ್ರ್ಯಾಕರ್ನಲ್ಲಿ ನೋಂದಾಯಿತ ಐದು ವರ್ಷದೊಳಗಿನ ಮಕ್ಕಳಲ್ಲಿ ಸುಮಾರು ಶೇ.37.07ರಷ್ಟು ಮಕ್ಕಳು ಕುಂಠಿತ ಬೆಳವಣಿಗೆ ಅಥವಾ ಕುಬ್ಜತೆಯನ್ನು,ಶೇ.15.93ರಷ್ಟು ಮಕ್ಕಳು ಕಡಿಮೆ ತೂಕವನ್ನು ಮತ್ತು ಶೇ.5.46ರಷ್ಟು ಮಕ್ಕಳು ಕೃಶಕಾಯವನ್ನು ಹೊಂದಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಹಾಯಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸಾವಿತ್ರಿ ಠಾಕೂರ್ ಅವರು,ಉ.ಪ್ರದೇಶದಲ್ಲಿ ಶೇ.48.83ರಷ್ಟು ಅತಿ ಹೆಚ್ಚಿನ ಕುಂಠಿತ ಬೆಳವಣಿಗೆ ವರದಿಯಾಗಿದ್ದು, ಜಾರ್ಖಂಡ್ (ಶೇ.43.26),ಬಿಹಾರ(ಶೇ.42.68) ಮತ್ತು ಮಧ್ಯಪ್ರದೇಶ(ಶೇ.42.09) ನಂತರದ ಸ್ಥಾನಗಳಲ್ಲಿವೆ ಎಂದು ತಿಳಿಸಿದರು.
ದತ್ತಾಂಶಗಳ ಪ್ರಕಾರ ಜೂನ್ 2025ಕ್ಕೆ ಇದ್ದಂತೆ ಆರು ವರ್ಷದೊಳಗಿನ ಸುಮಾರು 8.61 ಕೋಟಿ ಮಕ್ಕಳು ಪೋಷಣ ಟ್ರ್ಯಾಕರ್ನಲ್ಲಿ ನೋಂದಾಯಿಸಲ್ಪಟ್ಟಿದ್ದು,ಕಳೆದ ವರ್ಷದ 8.91 ಕೋಟಿಗೆ ಹೋಲಿಸಿದರೆ ಸ್ವಲ್ಪ ಇಳಿಕೆಯಾಗಿದೆ.
ಸುಮಾರು ಎರಡು ಲಕ್ಷ ಅಂಗನವಾಡಿಗಳನ್ನು ಆಧುನಿಕ ಮೂಲಸೌಕರ್ಯ ಮತ್ತು ಡಿಜಿಟಲ್ ಕಲಿಕೆ ಸಾಧನಗಳೊಂದಿಗೆ ‘ಸಕ್ಷಮ ಅಂಗನವಾಡಿ’ಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಪ್ರಸ್ತುತ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 88,716 ಮಿನಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಲಾಗಿದೆ ಎಂದೂ ಠಾಕೂರ್ ಲಿಖಿತ ಉತ್ತರದಲ್ಲಿ ತಿಳಿಸಿದರು.







