ಬಿಹಾರ: ನಕಲಿ ಅಭ್ಯರ್ಥಿಗಳಿಂದ ನೀಟ್ ಪರೀಕ್ಷೆ ಬರೆಸುವ ಹಗರಣ ಬಯಲು
ವೈದ್ಯ ಸೇರಿದಂತೆ ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ | PC : freepik.com
ಪಾಟ್ನಾ: ನೀಟ್ ಪ್ರವೇಶ ಪತ್ರಗಳನ್ನು ತಿದ್ದಿ ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆಯಲು ನಕಲಿ ಅಭ್ಯರ್ಥಿಗಳನ್ನು ನಿಯೋಜಿಸುವ ಇಬ್ಬರು ಸದಸ್ಯರ ತಂಡವೊಂದನ್ನು ಪೊಲೀಸರು ಬಿಹಾರದಲ್ಲಿ ಸೋಮವಾರ ಬಂಧಿಸಿದ್ದಾರೆ.
ಬಂಧಿತರಲ್ಲಿ ಒಬ್ಬ ಬೆಗುಸರಾಯಿ ಜಿಲ್ಲಾ ಜೈಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯನಾಗಿದ್ದಾನೆ.
ರವಿವಾರ ನಡೆದ ನೀಟ್ 2025 ಪರೀಕ್ಷೆಯ ವೇಳೆ, ಸಮಸ್ಟಿಪುರ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ತಂಡವೊಂದು ಕಾರಿನಲ್ಲಿ ಸುತ್ತಾಡಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತು ಎಂದು ಸಮಸ್ಟಿಪುರ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಸಂಜಯ್ ಕುಮಾರ್ ಪಾಂಡೆ ತಿಳಿಸಿದರು.
‘‘ಆ ವಾಹನವನ್ನು ಮೋಹನ್ ಪುರ ಸೇತುವೆಯ ಸಮೀಪ ನಿಲ್ಲಿಸಲಾಯಿತು. ಅದರಿಂದ ದರ್ಭಾಂಗ ನಿವಾಸಿ ರಾಮ್ ಬಾಬು ಮಲಿಕ್ ಮತ್ತು ಬೆಗುಸರಾಯಿ ಜೈಲಿನ ವೈದ್ಯ ಡಾ. ರಂಜಿತ್ ಕುಮಾರ್ ಎಂಬವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು’’ ಎಂದು ಪಾಂಡೆ ತಿಳಿಸಿದರು.
ಪರೀಕ್ಷೆ ಬರೆಯಲು ನೈಜ ಅಭ್ಯರ್ಥಿಗಳ ಬದಲಿಗೆ ನಕಲಿ ಅಭ್ಯರ್ಥಿಗಳನ್ನು ಒದಗಿಸುವ ಕೆಲಸವನ್ನು ಮಾಡಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
‘‘ಇದಕ್ಕಾಗಿ ಅಭ್ಯರ್ಥಿಗಳಿಂದ ದೊಡ್ಡ ಮೊತ್ತವನ್ನು ಪಡೆದು ಕೊಂಡಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ. ನೈಜ ಅಭ್ಯರ್ಥಿಗಳ ಪರವಾಗಿ ಪರೀಕ್ಷೆ ಬರೆಯುವ ನಕಲಿ ಅಭ್ಯರ್ಥಿಗಳಿಗೆ ಪ್ರತಿಯೊಂದು ಪರೀಕ್ಷೆಗೆ 2 ಲಕ್ಷದಿಂದ 5 ಲಕ್ಷ ರೂ.ವರೆಗೆ ನೀಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ’’ ಎಂದು ಅವರು ಹೇಳಿದರು.
ಇದಕ್ಕಾಗಿ ಭಾವಚಿತ್ರಗಳು, ಗುರುತು ಚೀಟಿಗಳು, ಸಹಿಗಳು ಮತ್ತು ಆಧಾರ್ ಕಾರ್ಡ್ಗಳನ್ನು ತಿದ್ದಲಾಗುತ್ತಿತ್ತು ಹಾಗೂ ನೈಜ ಅಭ್ಯರ್ಥಿಗಳ ವಿವರಗಳಿರುವ ಜಾಗದಲ್ಲಿ ನಕಲಿ ಅಭ್ಯರ್ಥಿಗಳ ವಿವರಗಳನ್ನು ಸೇರಿಸಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.







