ಇಂಟರ್ನೆಟ್ ನಿಷೇಧ ಮುಂದುವರಿಸುವಂತಿಲ್ಲ: ಮಣಿಪುರ ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಮಣಿಪುರ ಹೈಕೋರ್ಟ್ (Photo: livelaw.in)
ಇಂಫಾಲ್: ಇಂಟರ್ನೆಟ್ ಸೇವೆಗಳು ಸಂವಿಧಾನದ ವಿಧಿ 21 ಅನ್ವಯ ನಾಗರಿಕರ ವಾಕ್ ಸ್ವಾತಂತ್ರ್ಯದ ಭಾಗವಾಗಿರುವುದರಿಂದ ಇಡೀ ಮಣಿಪುರ ರಾಜ್ಯದಲ್ಲಿ ಈಗ ಜಾರಿಯಲ್ಲಿರುವ ಇಂಟರ್ನೆಟ್ ನಿಷೇಧವನ್ನು ಸರಕಾರ ಮುಂದುವರಿಸುವ ಹಾಗಿಲ್ಲ ಎಂದು ಮಣಿಪುರ ಹೈಕೋರ್ಟ್ ಇಂದು ಹೇಳಿದೆ. ರಾಜ್ಯಾದ್ಯಂತ ಇಂಟರ್ನೆಟ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಪಿಐಎಲ್ನ ವಿಚಾರಣೆಯನ್ನು ಇಂದು ಹೈಕೋರ್ಟ್ ನಡೆಸಿದೆ.
ಸರ್ಕಾರವು ಈ ಹಿಂದೆ ಇಂಟರ್ನೆಟ್ ನಿಷೇಧ ಕೈಬಿಟ್ಟ ಪ್ರದೇಶಗಳನ್ನು ಹೊರತುಪಡಿಸಿ ಇತರ ಸ್ಥಳಗಳಲ್ಲಿ ಡಿಸೆಂಬರ್ 3ರವರೆಗೆ ನಿಷೇಧ ವಿಸ್ತರಿಸಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು.
ರಾಜ್ಯದಲ್ಲಿ ಜನಾಂಗೀಯ ಸಂಘರ್ಷದಿಂದ ಬಾಧಿತ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಪುನಃಸ್ಥಾಪಿಸುವಂತೆ ತಾನು ಈ ಹಿಂದೆ ನೀಡಿದ್ದ ಆದೇಶ ಪಾಲಿಸದೇ ಇರುವುದಕ್ಕೆ ಮುಖ್ಯ ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಮತ್ತು ನ್ಯಾಯಮೂರ್ತಿ ಗೋಲ್ಮೆ ಗೈಫುಲ್ಶಿಲ್ಲು ಕಬುಲ್ ಅವರ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಕಾನೂನಿನನ್ವಯ ಅಗತ್ಯವಿದ್ದಲ್ಲಿ ಮಾತ್ರ ನಿರ್ಬಂಧ ವಿಧಿಸುವಂತೆ ಸೂಚಿಸಿದ್ದೇವು. ಕೆಲ ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಶಾಂತಿಯಿದೆ. ಏಕೆ ಇಂಟರ್ನೆಟ್ ಸೇವೆಗಳನ್ನು ಪುನಃಸ್ಥಾಪಿಸಬಾರದು ಎಂದು ಹೈಕೋರ್ಟ್ ಪ್ರಶ್ನಿಸಿದೆ.