ಪಿಎನ್ಬಿ ಹಗರಣ: ನೀರವ್ ಮೋದಿ ಸಹೋದರ ನೇಹಾಲ್ ಅಮೆರಿಕದಲ್ಲಿ ಬಂಧನ

ನೇಹಾಲ್ ಮೋದಿ (Photo credit: moneycontrol.com)
ವಾಷಿಂಗ್ಟನ್ : ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಕೋಟ್ಯಾಂತರ ರೂ. ವಂಚಿಸಿ ಭಾರತದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿಯ ಸಹೋದರ ನೇಹಾಲ್ ಮೋದಿಯನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಸಲ್ಲಿಸಿದ ಗಡೀಪಾರು ಮನವಿಗಳ ಹಿನ್ನೆಲೆಯಲ್ಲಿ ನೇಹಾಲ್ ಮೋದಿಯನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ ಎಂದು timesofindia ವರದಿ ಮಾಡಿದೆ.
ಅಮೆರಿಕದ ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ ಪ್ರಕಾರ, ಬೆಲ್ಜಿಯಂ ಪ್ರಜೆ ನೇಹಾಲ್ ಮೋದಿಯನ್ನು ಜುಲೈ 4ರಂದು ಬಂಧಿಸಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 13,500 ಕೋಟಿ ರೂ. ವಂಚನೆ ಪ್ರಕರಣದಲ್ಲಿ ನೀರವ್ ಮೋದಿ, ಚಿಕ್ಕಪ್ಪ ಮೆಹುಲ್ ಚೋಕ್ಸಿ, ನೇಹಾಲ್ ಮತ್ತು ಇತರರು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖೆಯನ್ನು ಎದುರಿಸುತ್ತಿದ್ದಾರೆ. ನೀರವ್ ಮೋದಿ ಪರವಾಗಿ ಹಣವನ್ನು ವರ್ಗಾಯಿಸುವಲ್ಲಿ ನೆಹಾಲ್ ಪ್ರಮುಖ ಪಾತ್ರ ವಹಿಸಿದ್ದ ಎಂದು ಈಡಿ ಮತ್ತು ಸಿಬಿಐ ತನಿಖೆಯಲ್ಲಿ ಬಹಿರಂಗವಾಗಿತ್ತು.
ನೀರವ್ ಮೋದಿಯನ್ನು ಹಸ್ತಾಂತರಕ್ಕೆ ಬ್ರಿಟನ್ ಹೈಕೋರ್ಟ್ ಅನುಮೋದಿಸಿದೆ. ಆತ ಮೇಲ್ಮನವಿಗಳನ್ನು ಸಲ್ಲಿಸುತ್ತಿರುವುದರಿಂದ ಭಾರತಕ್ಕೆ ಕರೆತರುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಲಂಡನ್ ಜೈಲಿನಲ್ಲಿರುವ ನೀರವ್ ಮೋದಿಯನ್ನು 2019ರಲ್ಲಿ ʼಪರಾರಿಯಾಗಿರುವ ಆರ್ಥಿಕ ಅಪರಾಧಿʼ ಎಂದು ಘೋಷಿಸಲಾಗಿತ್ತು.