ವಂದೇಮಾತರಂ ಗೀತೆ ಮುಸ್ಲಿಮರನ್ನು ಪ್ರಚೋದಿಸಬಹುದು ಎಂದು ನೆಹರೂ ಹೇಳಿದ್ದರು: ಪ್ರಧಾನಿ ಮೋದಿ ಆರೋಪ

credit: PTI
ಹೊಸದಿಲ್ಲಿ: ವಂದೇಮಾತರಂ ಗೀತೆ ಕುರಿತು ಲೊಕಸಭೆಯಲ್ಲಿ ನಡೆದ ಚರ್ಚೆಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮತ್ತು ಜವಾಹರ್ ಲಾಲ್ ನೆಹರೂ ವಿರುದ್ಧ ವಾಗ್ದಾಳಿ ನಡೆಸಿದರು. ರಾಷ್ಟ್ರೀಯ ಹಾಡು ವಂದೇಮಾತರಂ ಅನ್ನು ಕಾಂಗ್ರೆಸ್ ತುಂಡು ತುಂಡು ಮಾಡಿತು. ವಂದೇಮಾತರಂ ಗೀತೆ ಮುಸ್ಲಿಮರನ್ನು ಪ್ರಚೋದಿಸಬಹುದು ಎಂದು ಜವಾಹರ್ ಲಾಲ್ ನೆಹರೂ ಹೇಳಿದ್ದರು ಎಂದು ಆರೋಪಿಸಿದರು.
ಇದಕ್ಕೂ ಮುನ್ನ, 1937ರಲ್ಲಿ ಕಾಂಗ್ರೆಸ್ ವಂದೇಮಾತರಂ ಗೀತೆಯ ಪ್ರಮುಖ ಸಾಲುಗಳನ್ನು ಕಿತ್ತು ಹಾಕಿತು. ಅದರಿಂದಾಗಿ ವಿಭಜನೆಯ ಬೀಜ ಬಿತ್ತನೆಯಾಯಿತು ಎಂದು ತಾವು ನೀಡಿದ್ದ ಹೇಳಿಕೆಯನ್ನೇ ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದರು.
ಈ ಹೇಳಿಕೆಯ ಬೆನ್ನಿಗೇ, ಲೋಕಸಭೆಯಲ್ಲಿ 'ನಾಚಿಕೆಗೇಡು', 'ನಾಚಿಕೆಗೇಡು' ಎಂಬ ಘೋಷಣೆಗಳು ಕೇಳಿ ಬಂದವು. "ಕಳೆದ ಶತಮಾನದಲ್ಲಿ ಕೆಲವು ಶಕ್ತಿಗಳು ರಾಷ್ಟ್ರೀಯ ಹಾಡಿಗೆ ವಿಶ್ವಾಸ ಘಾತುಕತನ ಮಾಡಿದವು" ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
"ವಂದೇ ಮಾತರಂ ಗೀತೆಯ ವಿರುದ್ಧ 1937ರಲ್ಲಿ ಮುಹಮ್ಮದ್ ಜಿನ್ನಾ ನೇತೃತ್ವದ ಸ್ವಾತಂತ್ರ್ಯಪೂರ್ವ ಮುಸ್ಲಿಂ ಲೀಗ್ ಅಭಿಯಾನ ಪ್ರಾರಂಭಿಸಿತು ಎಂದು ಮುಂದಿನ ತಲೆಮಾರಿಗೆ ತಿಳಿಸಬೇಕಿರುವುದು ನಮ್ಮ ಕರ್ತವ್ಯವಾಗಿದೆ. ಆದರೆ, ಇದನ್ನು ವಿರೋಧಿಸುವ ಬದಲು, ವಂದೇ ಮಾತರಂ ಗೀತೆಯ ಬಗ್ಗೆ ತನಿಖೆ ನಡೆಸಲು ಕಾಂಗ್ರೆಸ್ ಮತ್ತು ಜವಾಹರ್ ಲಾಲ್ ನೆಹರೂ ಮುಂದಾದರು" ಎಂದೂ ಅವರು ಆಪಾದಿಸಿದರು.







