ರಕ್ಷಣೆಯೂ ಇಲ್ಲ, ಸಂರಕ್ಷಣೆಯೂ ಇಲ್ಲ: ಅಂಬಾನಿಯ ವಂತಾರ ಪ್ರಾಣಿ ರಕ್ಷಣಾ ಕೇಂದ್ರದ ಕುರಿತು ದಕ್ಷಿಣ ಆಫ್ರಿಕಾ ವನ್ಯಜೀವಿ ಸಂಘಟನೆಯ ಕಳವಳ

ನರೇಂದ್ರ ಮೋದಿ | PC : PTI
ಹೊಸದಿಲ್ಲಿ: ದಕ್ಷಿಣ ಆಫ್ರಿಕಾದಿಂದ ದೊಡ್ಡ ಪ್ರಮಾಣದ ಮೊಸಳೆಗಳು ಹಾಗೂ ಚೀತಾಗಳಿಂದ ಹಿಡಿದು ಹುಲಿ ಮತ್ತು ಸಿಂಹದವರೆಗಿನ ವನ್ಯಜೀವಿಗಳನ್ನು ವಂತಾರ ಎಂದೂ ಕರೆಯಲಾಗುವ ಅನಂತ್ ಅಂಬಾನಿ ಒಡೆತನದ ಹಸಿರು ಪ್ರಾಣಿಶಾಸ್ತ್ರೀಯ, ರಕ್ಷಣೆ ಮತ್ತು ಪುನರ್ವಸತಿ ಕೇಂದ್ರಕ್ಕೆ ರಫ್ತು ಮಾಡುತ್ತಿರುವ ಕುರಿತು ದಕ್ಷಿಣ ಆಫ್ರಿಕಾದ ಪ್ರಾಣಿಗಳ ಹಿತಾಸಕ್ತಿಯನ್ನು ಪ್ರತಿನಿಧಿಸುತ್ತಿರುವ ‘ದಿ ವೈಲ್ಡ್ ಲೈಫ್ ಅನಿಮಲ್ ಪ್ರೊಟೆಕ್ಷನ್ ಫೋರಮ್ ಆಫ್ ಸೌತ್ ಆಫ್ರಿಕಾ’ ಎಂಬ ಸಹಭಾಗಿತ್ವ ಜಾಲವು ಕಳವಳ ವ್ಯಕ್ತಪಡಿಸಿದೆ.
ಗುಜರಾತ್ ನಲ್ಲಿರುವ ವಂತಾರ, ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿಯ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. 2,000ಕ್ಕೂ ಹೆಚ್ಚು ಪ್ರಭೇದಗಳನ್ನೊಳಗೊಂಡಿರುವ ಹಾಗೂ 1.5 ಲಕ್ಷ ರಕ್ಷಿಸಿದ, ಅಳಿವಿನಂಚಿನಲ್ಲಿರುವ ಹಾಗೂ ಅಪಾಯಕ್ಕೊಳಗಾದ ಪ್ರಾಣಿಗಳ ತಾಣವಾದ ವಂತಾರವನ್ನು ಅಂಬಾನಿ ಸಂಸ್ಥೆಯು ವನ್ಯಜೀವಿ ರಕ್ಷಣೆ, ಪುನರ್ವಸತಿ ಹಾಗೂ ಸಂರಕ್ಷಣಾ ಕೇಂದ್ರವೆಂದು ಕರೆದುಕೊಂಡಿದೆ. ಹೀಗಿದ್ದೂ, ಅದನ್ನು ಮೃಗಾಲಯ ಎಂದು ಕರೆದಿರುವ ‘ದಿ ವೈಲ್ಡ್ ಲೈಫ್ ಪ್ರೊಟೆಕ್ಷನ್ ಫೋರಮ್ ಆಫ್ ಸೌತ್ ಆಫ್ರಿಕಾ’ ಸಂಘಟನೆಯು, ದಕ್ಷಿಣ ಆಫ್ರಿಕಾದ ಅಳಿವಿನಂಚಿನಲ್ಲಿರುವ ಚೀತಾಗಳು, ಮೊಸಳೆಗಳು, ಹುಲಿಗಳು ಹಾಗೂ ಸಿಂಹಗಳು ಸೇರಿದಂತೆ ವನ್ಯಜೀವಿ ಪ್ರಭೇದಗಳನ್ನು ನಿರ್ವಹಿಸಲು ಸೂಕ್ತ ಸೌಲಭ್ಯಗಳನ್ನು ಹೊಂದಿಲ್ಲ ಎಂದು ಆರೋಪಿಸಿದೆ.
ಮಾರ್ಚ್ 6ರಂದು “ರಕ್ಷಣೆಯೂ ಇಲ್ಲ, ಸಂರಕ್ಷಣೆಯೂ ಇಲ್ಲ: ದಕ್ಷಿಣ ಆಫ್ರಿಕಾದಿಂದ ಪೂರೈಸಲಾಗಿರುವ ವನ್ಯಜೀವಿಗಳ ಸಂಗ್ರಹದಿಂದ ತುಂಬಿ ತುಳುಕುತ್ತಿರುವ ಭಾರತದ ವಂತಾರ” ಎಂದು ಶೀರ್ಷಿಕೆ ಹೊಂದಿರುವ ವರದಿಯನ್ನು ದಕ್ಷಿಣ ಆಫ್ರಿಕಾದ ಅರಣ್ಯ, ಮೀನುಗಾರಿಕೆ ಹಾಗೂ ಪರಿಸರ ಸಚಿವ ಡಿಯೋನ್ ಜಾರ್ಜ್ ಅವರನ್ನುದ್ದೇಶಿಸಿ ‘ದಿ ವೈಲ್ಡ್ ಲೈಫ್ ಪ್ರೊಟೆಕ್ಷನ್ ಫೋರಮ್ ಆಫ್ ಸೌತ್ ಆಫ್ರಿಕಾ’ ಸಂಘಟನೆ ಬಿಡುಗಡೆ ಮಾಡಿದೆ.
ವಂತಾರಗೆ ವನ್ಯಜೀವಿಗಳನ್ನು ರಫ್ತು ಮಾಡುತ್ತಿರುವ ಕುರಿತು ಮರು ಚಿಂತನೆ ನಡೆಸಬೇಕು ಎಂದು ದಕ್ಷಿಣ ಆಫ್ರಿಕಾದ ಅಳಿವಿನಂಚಿನಲ್ಲಿರುವ ವನ್ಯಜೀವಿ ಸಸ್ಯವರ್ಗ ಹಾಗೂ ಪ್ರಾಣಿವರ್ಗಗಳ ಅಂತಾರಾಷ್ಟ್ರೀಯ ವ್ಯಾಪಾರ ಸಮಾವೇಶದ ವ್ಯವಸ್ಥಾಪಕ ಪ್ರಾಧಿಕಾರ ಹಾಗೂ ದಕ್ಷಿಣ ಆಫ್ರಿಕಾ ವೈಜ್ಞಾನಿಕ ಪ್ರಾಧಿಕಾರದ ಮುಖ್ಯಸ್ಥರನ್ನೂ ಈ ಪತ್ರದಲ್ಲಿ ಆಗ್ರಹಿಸಲಾಗಿದೆ.
“ಭಾರತದ ಇನ್ನಿತರ ಭಾಗಗಳಿಗಿಂತ ಗುಜರಾತ್ ಹೆಚ್ಚು ಬಿಸಿಯಾಗಿರುವುದರಿಂದ ವಂತಾರ ಸ್ಥಳದ ಸೂಕ್ತತೆ ಬಗ್ಗೆ ಪ್ರಶ್ನೆಗಳೇಳುತ್ತವೆ. ಇದರಿಂದಾಗಿ, ಈ ಮೃಗಾಲಯಕ್ಕೆ ಆಮದಾಗುವ ಬಹುತೇಕ ಪ್ರಭೇದಗಳಿಗೆ ಈ ಸ್ಥಳವು ತುಂಬಾ ಅಸೂಕ್ತವಾಗಿದೆ” ಎಂದೂ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ವಂತಾರವನ್ನು ರಿಲಯನ್ಸ್ ಪೆಟ್ರೊಕೆಮಿಕಲ್ ಸಂಕೀರ್ಣಕ್ಕೆ ಹೊಂದಿಕೊಂಡಂತೆಯೇ ಸ್ಥಾಪಿಸಲಾಗಿದೆ. ತೈಲ ಸಂಸ್ಕರಣೆ ಹಾಗೂ ಪೆಟ್ರೊ ರಾಸಾಯನಿಕ ಉತ್ಪಾದನೆಗಳೆರಡೂ ಭಾರಿ ಪ್ರಮಾಣದಲ್ಲಿ ಮಾಲಿನ್ಯ ಉಂಟು ಮಾಡುವ ಉದ್ಯಮಗಳಾಗಿರುವುದಿಂದ, ಮೃಗಾಲಯದಲ್ಲಿಡಲಾಗಿರುವ ಪ್ರಾಣಿಗಳಿಗೆ ದೊರೆಯುವ ವಾಯು ಗುಣಮಟ್ಟದ ಬಗ್ಗೆ ವನ್ಯಜೀವಿ ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.