ನೇಪಾಳ ಬಸ್ ದುರಂತ: ಮೃತರ ಸಂಖ್ಯೆ 41ಕ್ಕೆ ಏರಿಕೆ

Photo: PTI
ಮುಂಬೈ: ನೇಪಾಳದ ತನಾಹುನ್ ಜಿಲ್ಲೆಯಲ್ಲಿ ನಡೆದ ಬಸ್ ಅಪಘಾತದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಈ ಸಂಗತಿಯನ್ನು ದೃಢಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಬಹುತೇಕ ಮಹಾರಾಷ್ಟ್ರ ಮೂಲದ ಭಾರತೀಯ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್, ಶುಕ್ರವಾರ ನೇಪಾಳದ ತನಾಹುನ್ ಜಿಲ್ಲೆಯ ಅಬುಕೇರೇನಿ ಪ್ರದೇಶದಲ್ಲಿನ ಮಾರ್ಸಿಂಗ್ಡಿ ನದಿಗೆ ಉರುಳಿ ಬಿದ್ದಿತ್ತು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಮಹಾಜನ್, ಪರಿಹಾರ ಕಾರ್ಯಾಚರಣೆಯೊಂದಿಗೆ ಸಮನ್ವಯ ಸಾಧಿಸಲು ನೇಪಾಳ ಆಡಳಿತ ಹಾಗೂ ದಿಲ್ಲಿಯಲ್ಲಿನ ನೇಪಾಳ ರಾಜತಾಂತ್ರಿಕರೊಂದಿಗಿನ ಸಂಪರ್ಕವನ್ನು ಮುಂದುವರಿಸಲಾಗಿದೆ ಎಂದು ಹೇಳಿದರು.
“ನದಿಗೆ ಬಸ್ ಉರುಳಿ ಬಿದ್ದ ಪರಿಣಾಮ 41 ಮಂದಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ನಾವು ದಿಲ್ಲಿಯಲ್ಲಿನ ರಾಜತಾಂತ್ರಿಕರೊಂದಿಗೆ ಸಂಪರ್ಕದಲ್ಲಿದ್ದು, ನೇಪಾಳ ಸೇನೆಯು 21 ಮಂದಿಯನ್ನು ಆಸ್ಪತ್ರೆಗೆ ಸಾಗಿಸಿದೆ” ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಬಹುತೇಕರು ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯರಾಗಿದ್ದು, 150 ಅಡಿ ಎತ್ತರದ ಕಣಿವೆಯಿಂದ ಬಸ್ ನದಿಗೆ ಉರುಳಿ ಬಿದ್ದಾಗ, ಅವರು ಫೋಖರಾದ ಕಣಿವೆ ಪ್ರದೇಶದಲ್ಲಿರುವ ಪ್ರವಾಸಿ ರೆಸಾರ್ಟ್ ನಿಂದ ನೇಪಾಳ ರಾಜಧಾನಿ ಕಠ್ಮಂಡುಗೆ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.







