ನೆಟ್ಫ್ಲಿಕ್ಸ್ ತೆಕ್ಕೆಗೆ ವಾರ್ನರ್ ಬ್ರದರ್ಸ್; ಐತಿಹಾಸಿಕ 82.7 ಶತಕೋಟಿ ಡಾಲರ್ ವ್ಯವಹಾರ

Netflix(Netflix | Brand Assets | Logos) , Warner Bros (Warner Bros)
ನೆಟ್ಫ್ಲಿಕ್ಸ್ ಮತ್ತು ವಾರ್ನರ್ ಬ್ರದರ್ಸ್ ಡಿಸ್ಕವರಿ ಜೊತೆಗೂಡಿ ಐತಿಹಾಸಿಕ 82.7 ಶತಕೋಟಿ ಡಾಲರ್ ವ್ಯವಹಾರವನ್ನು ಕುದುರಿಸಿವೆ. ಚಲನಚಿತ್ರ ಮತ್ತು ಟಿವಿ ಅಭಿಮಾನಿಗಳಿಗೆ ಈ ವಿಲೀನವು ಸ್ಟ್ರೀಮಿಂಗ್ ಇತಿಹಾಸದಲ್ಲಿ ಅತ್ಯಂತ ಶ್ರೀಮಂತ ವಿಷಯದ ಆಯ್ಕೆ ಎನ್ನಬಹುದು.
ನೆಟ್ಫ್ಲಿಕ್ಸ್ ಮತ್ತು ವಾರ್ನರ್ ಬ್ರದರ್ಸ್ ಡಿಸ್ಕವರಿ ಜೊತೆಗೂಡಿ ಐತಿಹಾಸಿಕ 82.7 ಶತಕೋಟಿ ಡಾಲರ್ ವ್ಯವಹಾರವನ್ನು ಕುದುರಿಸಿರುವುದನ್ನು ಘೋಷಿಸಿದೆ. ಗೇಮ್ ಆಫ್ ಥ್ರೋನ್ಸ್ ಅಥವಾ ಹ್ಯಾರಿ ಪಾಟರ್ ಅನ್ನು ನೆಟ್ಫ್ಲಿಕ್ಸ್ ವೇದಿಕೆಯಲ್ಲಿ ನೋಡುವ ಕಾಲ ಬಂದಿದೆ. ಈ ವ್ಯವಹಾರದಿಂದಾಗಿ ವೆಸ್ಟೆರೊಗಳು, ಹಾಗ್ವಾರ್ಟ್ಗಳು ಮತ್ತು ಗೋಥಮ್ ನಗರದ ಕತೆಗಳು ಇನ್ನು ಮುಂದೆ ನೆಟ್ಫ್ಲಿಕ್ಸ್ನಲ್ಲಿ ದೊರೆಯಲಿದೆ.
ನೆಟ್ಫ್ಲಿಕ್ಸ್-ವಾರ್ನರ್ ಬ್ರದರ್ಸ್ ಐತಿಹಾಸಿಕ ವಿಲೀನ
ನೆಟ್ಫ್ಲಿಕ್ಸ್ ಮತ್ತು ವಾರ್ನರ್ ಬ್ರದರ್ಸ್ ಡಿಸ್ಕವರಿ ಜೊತೆಗೂಡಿ ಐತಿಹಾಸಿಕ 82.7 ಶತಕೋಟಿ ಡಾಲರ್ ವ್ಯವಹಾರವನ್ನು ಕುದುರಿಸಿವೆ. ಈ ಪ್ರಸಿದ್ಧ ಸಂಸ್ಥೆ ನೆಟ್ಫ್ಲಿಕ್ಸ್ ಜೊತೆಗೆ ಕೈಜೋಡಿಸಿರುವುದು ಸ್ಟ್ರೀಮಿಂಗ್ ವೇದಿಕೆಗಳ ಪರಿಸರವನ್ನೇ ಬುಡಮೇಲು ಮಾಡಲಿದೆ. ಎರಡೂ ಕಂಪನಿಗಳ ಮಂಡಳಿಗಳು ವಿಲೀನಕ್ಕೆ ಸರ್ವಾನುಮತದಿಂದ ಅನುಮೋದಿಸಿವೆ. ಈ ಒಪ್ಪಂದದಲ್ಲಿ ಎಚ್ಬಿಒ, ಎಚ್ಬಿಒ ಮ್ಯಾಕ್ಸ್, ವಾರ್ನರ್ ಬ್ರದರ್ಸ್ ಚಲನಚಿತ್ರ, ಟಿವಿ ಸ್ಟುಡಿಯೊಗಳು ಮತ್ತು ಡಿಸಿ ಎಂಟರ್ಟೈನ್ಮೆಂಟ್ ಸೇರಿವೆ. ಇದು ಮನೋರಂಜನಾ ಉದ್ಯಮದ ಆಧುನಿಕ ಇತಿಹಾಸದ ಅತಿದೊಡ್ಡ ಒಪ್ಪಂದವಾಗಿದೆ.
ನೆಟ್ಫ್ಲಿಕ್ಸ್ ನೀಡಿರುವ ವಿವರಗಳ ಪ್ರಕಾರ ಮಾರಾಟದ ಒಟ್ಟು ಷೇರು ಮೌಲ್ಯವು 72 ಶತಕೋಟಿ ಡಾಲರ್ ಆಗಿದೆ. ಪ್ಯಾರಾಮೌಂಟ್ ಸ್ಕೈಡಾನ್ಸ್ ಮತ್ತು ಕಾಮ್ಸ್ಟಾನ್ನ ಎನ್ಬಿಸಿ ಯುನಿವರ್ಸಲ್ ಅನ್ನು ಹಿಂದಿಕ್ಕಿ ನೆಟ್ಫ್ಲಿಕ್ಸ್ ಈ ವಿಲೀನವನ್ನು ಮಾಡಿಕೊಂಡಿದೆ. ನೆಟ್ಫ್ಲಿಕ್ಸ್ ಈ ವಹಿವಾಟಿನಲ್ಲಿ ಡಿಸ್ಕವರಿ ಷೇರುಗಳಿಗೆ ತಲಾ 27.75ರಂತೆ ಬೆಲೆ ಇಟ್ಟಿತ್ತು. ಇದು ಸ್ಪರ್ಧಿಗಳನ್ನು ದೂರ ಮಾಡಿದೆ.
ಈ ವಿಲೀನದಿಂದ ಪ್ರೇಕ್ಷಕರಿಗೆ ಏನು ಸಿಗಲಿದೆ?
ಒಪ್ಪಂದವು ಅಂತಿಮಗೊಂಡ ನಂತರ, ನೆಟ್ಫ್ಲಿಕ್ಸ್ ಬಳಕೆದಾರರು ವಾರ್ನರ್ ಬ್ರದರ್ಸ್ ಕ್ಲಾಸಿಕ್ಗಳು ಮತ್ತು ಸಮಕಾಲೀನ ಹಿಟ್ಗಳ ಬೃಹತ್ ಕ್ಯಾಟಲಾಗ್ ಅನ್ನು ನೋಡುವ ಅವಕಾಶ ಪಡೆಯಲಿದ್ದಾರೆ. ಅಂದರೆ ಎಚ್ಬಿಒ ಮೂಲಗಳಿಂದ (ಗೇಮ್ ಆಫ್ ಥ್ರೋನ್ಸ್, ದಿ ಲಾಸ್ಟ್ ಆಫ್ ಅಸ್, ಸಕ್ಸೆಷನ್) ಹ್ಯಾರಿ ಪಾಟರ್, ದಿ ಡಾರ್ಕ್ ನೈಟ್ ಮತ್ತು ಡಿಸಿ ಕಾಮಿಕ್ಸ್ ಸಂಗ್ರಹದಂತಹ ಬ್ಲಾಕ್ಬಸ್ಟರ್ ಪ್ರಪಂಚಕ್ಕೆ ನೆಟ್ಫ್ಲಿಕ್ಸ್ ಬಳಕೆದಾರರಿಗೆ ಬಾಗಿಲು ತೆರೆಯಲಿದೆ. ಇವೆಲ್ಲವೂ ಇದೀಗ ಸ್ಟ್ರೇಂಜರ್ ಥಿಂಗ್ಸ್ ಮತ್ತು ಬ್ರಿಡ್ಜರ್ಟನ್ ಜೊತೆಗೆ ಸ್ಟ್ರೀಮಿಂಗ್ ಆಗಬಹುದು.
ವಾರ್ನರ್ ಬ್ರದರ್ಸ್ ಹಿರಿತೆರೆಯಲ್ಲಿ ಬಿಡುಗಡೆಗೆ ಸಿನಿಮಾ ತಯಾರಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದೆ. ಆದರೆ ಶೀಘ್ರವೇ ಹಿರಿತೆರೆಯಿಂದ ಸ್ಟ್ರೀಮಿಂಗ್ ಕಡೆಗೆ ವಾಲುವುದನ್ನು ನೋಡಬಹುದು ಎಂದು ಉದ್ಯಮ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ನೆಟ್ಫ್ಲಿಕ್ಸ್ನ ಒರಿಜಿನಲ್ ಕತೆಗಳ ಜೊತೆಗೆ ಎಚ್ಬಿಒ ಲೈಬ್ರರಿಗೂ ನಡುವೆ ಸಂಯೋಜಿತ ಯೋಜನೆಗಳು ಬರಬಹುದು.
ಚಲನಚಿತ್ರ ಮತ್ತು ಟಿವಿ ಅಭಿಮಾನಿಗಳಿಗೆ ಈ ವಿಲೀನವು ಸ್ಟ್ರೀಮಿಂಗ್ ಇತಿಹಾಸದಲ್ಲಿ ಅತ್ಯಂತ ಶ್ರೀಮಂತ ವಿಷಯದ ಆಯ್ಕೆ ಎನ್ನಬಹುದು. ನೆಟ್ಫ್ಲಿಕ್ಸ್ ಮಾತ್ರದಲ್ಲಿ ಎಲ್ಲವೂ ಸಿಗುವಾಗ ಬೇರೆಡೆಗೆ ದುಡ್ಡು ಹಾಕುವ ಅಗತ್ಯ ಬಾರದು. ವೀಕ್ಷಕರಿಗೆ ಆಯ್ಕೆಯ ವ್ಯಾಪ್ತಿಯನ್ನು ದುಪ್ಪಟ್ಟುಗೊಳಿಸಲಿದೆ ಎಂದು ವರದಿಯಾಗಿದೆ.







