ಒಟಿಟಿ ನಿಯಂತ್ರಿಸಲು ಕೇಂದ್ರದಿಂದ ನೂತನ ಮಸೂದೆ
Photo: Canva
ಹೊಸದಿಲ್ಲಿ: ನೆಟ್ಫ್ಲಿಕ್ಸ್, ಹಾಟ್ಸ್ಟಾರ್ ಮತ್ತು ಅಮೆಝಾನ್ ಪ್ರೈಮ್ ವೀಡಿಯೊ ಮುಂತಾದ ‘ಓವರ್ ದ ಟಾಪ್’ (ಒಟಿಟಿ) ಕಂಪೆನಿಗಳನ್ನು ನಿಯಂತ್ರಿಸುವ ಉದ್ದೇಶದ ಮಸೂದೆಯೊಂದನ್ನು ಕೇಂದ್ರ ಸರಕಾರ ಶುಕ್ರವಾರ ಹೊರತಂದಿದೆ.
‘‘ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡಿರುವುದಕ್ಕಾಗಿ’’ ಭಾರತದಲ್ಲಿ ಹಲವು ಬಾರಿ ಸ್ಟ್ರೀಮಿಂಗ್ ಮಾಧ್ಯಮಗಳು ಪೊಲೀಸ್ ಮೊಕದ್ದಮೆಗಳನ್ನು ಎದುರಿಸಿವೆ ಹಾಗೂ ಕಳೆದ ಹಲವು ವರ್ಷಗಳಲ್ಲಿ ಹೆಚ್ಚಿನ ಒಟಿಟಿ ಕಂಪೆನಿಗಳು ಸ್ವತಃ ಸೆನ್ಸಾರ್ ಮಾಡಿದ ಕಾರ್ಯಕ್ರಮಗಳನ್ನು ಪ್ರಸಾರಮಾಡುತ್ತಿವೆ.
ಅದೂ ಅಲ್ಲದೆ, ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆ, 2023, ಯಾವುದೇ ಆನ್ಲೈನ್ ನಿರ್ಮಾಪಕ ಅಥವಾ ಸುದ್ದಿ ಮಾಧ್ಯಮ ವೇದಿಕೆಯನ್ನು ನಿಯಂತ್ರಿಸಲೂ ಸರಕಾರಕ್ಕೆ ಅಧಿಕಾರ ನೀಡುತ್ತದೆ ಎಂದು ವಿಷಯ ಪರಿಣತ ಹಾಗೂ ಇಂಟರ್ನೆಟ್ ಫ್ರೀಡಮ್ ಫೌಂಡೇಶನ್ನ ಸ್ಥಾಪಕ ನಿರ್ದೇಶಕ ಅಪರ್ ಗುಪ್ತ ಹೇಳುತ್ತಾರೆ.
ಭವಿಷ್ಯದಲ್ಲಿ ಸೃಷ್ಟಿಯಾಗಬಹುದಾದ ಯಾವುದೇ ಹೊಸ ಒಟಿಟಿ ವೇದಿಕೆಯನ್ನೂ ಸರಕಾರದ ನಿಯಂತ್ರಣಕ್ಕೆ ಒಳಪಡಿಸುವ ಪ್ರಸ್ತಾವವನ್ನೂ ನೂತನ ಕರಡು ಮಸೂದೆ ಹೊಂದಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
1995ರ ಕೇಬಲ್ ಟೆಲಿವಿಶನ್ ನೆಟ್ವರ್ಕ್ಸ್ (ನಿಯಂತ್ರಣ) ಕಾಯ್ದೆಯ ಜಾಗದಲ್ಲಿ ಬರುವ ಈ ಮಸೂದೆಯು, ವಸ್ತು ಮೌಲ್ಯಮಾಪನಾ ಸಮಿತಿಗಳನ್ನು ರಚಿಸಲೂ ಅವಕಾಶ ನೀಡುತ್ತದೆ.