ಹೊಸ ಜಿಎಸ್ಟಿ ದರ, ಆದಾಯ ತೆರಿಗೆ ದರ ಬದಲಾವಣೆಯಿಂದ ಭಾರತೀಯರಿಗೆ 2.5 ಲಕ್ಷ ಕೋಟಿ ರೂ. ಉಳಿತಾಯ: ಪ್ರಧಾನಿ ಮೋದಿ

PC: PTI
ಹೊಸದಿಲ್ಲಿ: ಸೋಮವಾರದಿಂದ ಜಾರಿಗೆ ಬಂದಿರುವ ಹೊಸ ಜಿಎಸ್ಟಿ ದರ ಹಾಗೂ ಈ ವರ್ಷದ ಆರಂಭದಲ್ಲಿ ಘೋಷಿಸಿದ ಆದಾಯ ತೆರಿಗೆ ದರ ಬದಲಾವಣೆಯಿಂದ ಭಾರತೀಯರಿಗೆ 2.5 ಲಕ್ಷ ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ, ಈ ಬದಲಾವಣೆಯನ್ನು "ಉಳಿತಾಯದ ಹಬ್ಬ" ಎಂದು ಕರೆದ ಮೋದಿ, ಆದಾಯ ತೆರಿಗೆ ಬದಲಾವಣೆಗಳು ಮಧ್ಯಮ ವರ್ಗಕ್ಕೆ ನೆರವಾಗಿದ್ದರೆ, ಜಿಎಸ್ಟಿ ಕಡಿತ ಬಡವರು ಮತ್ತು ಮಧ್ಯಮವರ್ಗದವರಿಗೆ ನೆರವಾಗಲಿವೆ ಎಂದು ಪ್ರತಿಪಾದಿಸಿದರು.
"ಜನರು ಈಗ ಹೆಚ್ಚು ಉಳಿಸಿ ತಾವು ಇಷ್ಟಪಟ್ಟಿದ್ದನ್ನು ಖರೀದಿಸಬಹುದಾಗಿದೆ. ಈ ಸುಧಾರಣೆಗಳೊಂದಿಗೆ ಯುವಕರು, ರೈತರು, ಮಹಿಳೆಯರು, ಅಂಗಡಿ ಮಾಲೀಕರು, ವ್ಯಾಪಾರಿಗಳು, ಉದ್ಯಮಿಗಳು ಉಳಿತಾಯ ಹಬ್ಬದ ಲಾಭ ಪಡೆಯಬಹುದು. ಈ ಹಬ್ಬದ ಸೀಸನ್ನಲ್ಲಿ ಪ್ರತಿಯೊಬ್ಬರಿಗೂ ಒಂದಷ್ಟು ಸಂಸತದ ಅಂಶಗಳಿರುತ್ತವೆ" ಎಂದು ಹೇಳಿದರು.
ದೇಶದಲ್ಲಿ ಹಣದುಬ್ಬರ ಪ್ರಮಾಣ ಶೇಕಡ 2 ಆಸುಪಾಸು ಇರುವುದನ್ನೂ ಉಲ್ಲೇಖಿಸಿದ ಪ್ರಧಾನಿ, ಹಬ್ಬದ ಸಂದರ್ಭದಲ್ಲಿ ದಿನಬಳಕೆ ವಸ್ತುಗಳಿಂದ ಹಿಡಿದು ಬಟ್ಟೆ ಬರೆಯವರೆಗೆ, ಎಲೆಕ್ಟ್ರಾನಿಕ್ ಸರಕುಗಳಿಂದ ಹಿಡಿದು ಕಲಾಕೃತಿಗಳವರೆಗೆ ಖರೀದಿಸಲು ವೆಚ್ಚ ಮಾಡುವಂತೆ ಉತ್ತೇಜಿಸಿದರು.
ಅಮೆರಿಕ ಜತೆಗಿನ ವ್ಯಾಪಾರ ಸಂಘರ್ಷದ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುವುದು ಭಾರತದ ಆರ್ಥಿಕತೆಯ ದೃಷ್ಟಿಯಿಂದ ಅನಿವಾರ್ಯವಾಗಿದೆ.







