ನೂತನ ಐಸಿಎಆರ್ ಬಾಸ್ಮತಿ ಅಕ್ಕಿ ತಳಿಗಳಿಗೆ ಪರಿಸರವಾದಿಗಳಿಂದ ಟೀಕೆ

PC : ztmbpd.iari.res.in
ಹೊಸದಿಲ್ಲಿ : ದೇಶದ ಪ್ರಮುಖ ಸಂಶೋಧನಾ ಸಂಸ್ಥೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್)ಯು ಎರಡು ಕಳೆನಾಶಕ-ಸಹಿಷ್ಣು (ಎಚ್ಟಿ) ಪರಿಮಳಭರಿತ ಬಾಸ್ಮತಿ ಅಕ್ಕಿ ತಳಿಗಳನ್ನು ವಾಣಿಜ್ಯಿಕವಾಗಿ ಬಿಡುಗಡೆಗೊಳಿಸಿದೆ. ಈ ತಳಿಗಳು ಕಡಿಮೆ ನೀರನ್ನು ಬಳಸುತ್ತವೆ, ಮಿಥೇನ್ನಂತಹ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ತಗ್ಗಿಸುತ್ತವೆ ಮತ್ತು ಅಕ್ಕಿಯ ಇಳುವರಿಯನ್ನು ಹೆಚ್ಚಿಸುತ್ತವೆ ಎಂದು ಐಸಿಎಆರ್ ಹೇಳಿಕೆ ನೀಡಿದೆ. ಇದನ್ನು ಪ್ರಶ್ನಿಸಿರುವ ವಿಜ್ಞಾನಿಗಳ ಗುಂಪೊಂದು, ಇದು ಅತಿಯಾದ ಉತ್ಪ್ರೇಕ್ಷೆಯಿಂದ ಕೂಡಿದೆ ಮತ್ತು ನೂತನ ತಳಿಗಳು ದೇಶದ ಅಕ್ಕಿ ಜೀವವೈವಿಧ್ಯತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ ಎಂದು ಹೇಳಿದೆ.
ಎರಡು ಹೊಸ ತಳಿಗಳಾದ ಪುಸಾ ಬಾಸ್ಮತಿ 1979 ಮತ್ತು ಪುಸಾ ಬಾಸ್ಮತಿ 1985 ತಳೀಯವಾಗಿ ಮಾರ್ಪಡಿಸಿರದ ಅಕ್ಕಿಯ ಪ್ರಭೇದಗಳಾಗಿದ್ದು, ಮೂರು ವರ್ಷಗಳ ಕಾಲ ಪ್ರಯೋಗಗಳನ್ನು ನಡೆಸಿ ಅಭಿವೃದ್ಧಿಗೊಳಿಸಲಾಗಿದೆ. ಇವು ಹಾಲಿ ಅಸ್ತಿತ್ವದಲ್ಲಿರುವ ಪುಸಾ ಬಾಸ್ಮತಿ 1121 ಮತ್ತು ಪುಸಾ ಬಾಸ್ಮತಿ 1509ರ ಸುಧಾರಿತ ಆವೃತ್ತಿಗಳಾಗಿವೆ.
ಹೊಸ ಪ್ರಭೇದಗಳು ಕಳೆನಾಶಕಗಳನ್ನು ನೇರವಾಗಿ ಅನ್ವಯಿಸಲು ಅನುವು ಮಾಡಿಕೊಡುತ್ತವೆ. ಈ ತಳಿಗಳು ರೂಪಾಂತರಿತ ಎಎಲ್ಎಸ್ ವಂಶವಾಹಿಯನ್ನು ಒಳಗೊಂಡಿರುವುದರಿಂದ ಕೆಲವು ಪ್ರಬಲ ಕಳೆಗಳು ನಿರ್ಮೂಲನಗೊಳ್ಳುತ್ತವೆ.
ನೂತನ ತಳಿಗಳು ತಳೀಯವಾಗಿ ಮಾರ್ಪಡಿಸಿದ ಸಾಸಿವೆ ಮತ್ತು ಬದನೆಯಂತೆ ವಿವಾದಾತ್ಮಕವಲ್ಲ. ನಾಟಿ ಪ್ರಕ್ರಿಯೆಯನ್ನು ನಿವಾರಿಸಿ ನೇರ ಬೀಜಗಳ ಬಿತ್ತನೆಯನ್ನು ಉತ್ತೇಜಿಸುತ್ತವೆ ಮತ್ತು ಕಡಿಮೆ ನೀರಿನಲ್ಲಿ ಬೆಳೆಯಬಹುದಾಗಿದೆ ಎಂದು ಐಸಿಎಆರ್ ಜಂಟಿ ನಿರ್ದೇಶಕ ಡಾ.ರವೀಂದ್ರ ಪಡಾರಿಯಾ ತಿಳಿಸಿದರು.
ಹೊಸ ಪ್ರಭೇದಗಳ ಪ್ರಯೋಗ ಪ್ರಕ್ರಿಯೆ ಮೇಲೆ ನಿಕಟ ನಿಗಾಯಿರಿಸಿದ್ದ ಐಸಿಎಆರ್-ಐಎಆರ್ಐನ ಮಾಜಿ ಪ್ರಧಾನ ವಿಜ್ಞಾನಿ ಡಾ.ವೀರೇಂದ್ರ ಸಿಂಗ್ ಲಾಥೆರ್-ಕರ್ನಾಲ್ ಅವರು ಐಸಿಎಆರ್ ಪ್ರತಿಪಾದನೆಯನ್ನು ಒಪ್ಪುವುದಿಲ್ಲ.
ನೇರ ಬೀಜಗಳ ಬಿತ್ತನೆಗೆ ನೆರವಾಗಲು ಇಂತಹ ತಂತ್ರಜ್ಞಾನದ ಅಗತ್ಯವಿಲ್ಲ. ಏಕೆಂದರೆ ಬಿತ್ತನೆ ದಿನಾಂಕವನ್ನು ಮೇ 15ರಿಂದ ಜೂನ್ 10ರ ನಡುವೆ ಹಿಂದೂಡುವ ಮೂಲಕ ಹವಾಮಾನ ಅಂಶಗಳನ್ನು ಬಳಸಿಕೊಂಡು ಸುಲಭವಾಗಿ ನಿರ್ವಹಿಸಬಹುದು ಎಂದು ಹೇಳಿದ ಅವರು, ಜೂ.10ರ ನಂತರ ಮಳೆಗಾಲ ಆರಂಭವಾಗುತ್ತಿದ್ದಂತೆ ಸಾಮಾನ್ಯವಾಗಿ ಆರ್ದ್ರತೆ ಹೆಚ್ಚುತ್ತದೆ ಮತ್ತು ಕಳೆಗಳ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಿದರು.
ನೂತನ ಪ್ರಭೇದಗಳು ಕಳೆನಾಶಕಗಳ ನೇರ ಅನ್ವಯಕ್ಕೆ ಅವಕಾಶವನ್ನು ಒದಗಿಸುತ್ತವೆ. ಇದು ನಿರ್ದಿಷ್ಟ ತಳಿಗಳನ್ನು ಮಾತ್ರ ನಿರ್ಮೂಲನಗೊಳಿಸುತ್ತದೆ. ಇತರ ಕಳೆಗಳಿಗಾಗಿ ರೈತರು ಮತ್ತೆ ಬೇರೊಂದು ಕಳೆನಾಶಕವನ್ನು ಸಿಂಪಡಿಸಬೇಕಾಗುತ್ತದೆ ಮತ್ತು ಇದರಿಂದ ಕೃಷಿ ವೆಚ್ಚವು ಹೆಚ್ಚುತ್ತದೆ ಎಂದರು.
ಇತರ ತಜ್ಞರೂ ಎಚ್ಟಿ ಅಕ್ಕಿಯು ಭಾರತೀಯ ಅಕ್ಕಿಯ ಅನುವಂಶಿಕ ವೈವಿಧ್ಯವನ್ನು ಬೆಂಬಲಿಸುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.







