ನೂತನ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವ, ರದ್ದುಗೊಳಿಸುವ ಪ್ರಯತ್ನ: ವಿಪಕ್ಷ

Photo Credit : PTI
ಹೊಸದಿಲ್ಲಿ,ನ.23: ಕೇಂದ್ರ ಸರಕಾರದ ವಿರುದ್ಧ ಮುಗಿಬಿದ್ದಿರುವ ಪ್ರತಿಪಕ್ಷಗಳು,ಅದು ಇತ್ತೀಚಿಗೆ ತಂದಿರುವ ನಾಲ್ಕು ನೂತನ ಕಾರ್ಮಿಕ ಸಂಹಿತೆಗಳು ದೀರ್ಘಕಾಲದಿಂದ ಅಸ್ತಿತ್ವದಲ್ಲಿರುವ ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವ ಮತ್ತು ರದ್ದುಗೊಳಿಸುವ ಪ್ರಯತ್ನವಾಗಿದ್ದು,ಉದ್ಯೋಗದಾತರ ಪರವಾಗಿವೆ ಎಂದು ಕಿಡಿಕಾರಿವೆ.
ಎಕ್ಸ್ ಪೋಸ್ಟ್ನಲ್ಲಿ ಸರಕಾರದ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ನಿಯಮಗಳನ್ನು ಇನ್ನೂ ಅಧಿಸೂಚಿಸಿಲ್ಲವಾದರೂ ಅಸ್ತಿತ್ವದಲ್ಲಿದ್ದ 29 ಕಾರ್ಮಿಕ ಸಂಬಂಧಿತ ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ಮರು-ಪ್ಯಾಕ್ ಮಾಡಲಾಗಿದೆ ಮತ್ತು ಅವುಗಳನ್ನು ಏನೋ ಕ್ರಾಂತಿಕಾರಿ ಸುಧಾರಣೆಗಳೆಂಬಂತೆ ಮಾರ್ಕೆಟಿಂಗ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಭಾರೀ ಪ್ರಚಾರದೊಂದಿಗೆ ಪರಿಚಯಿಸಲಾಗಿರುವ ನೂತನ ಕಾರ್ಮಿಕ ಸಂಹಿತೆಗಳಡಿ ‘ಶ್ರಮಿಕ ನ್ಯಾಯ’ವನ್ನು ವಾಸ್ತವವನ್ನಾಗಿ ಮಾಡಲು ಮೋದಿ ಸರಕಾರವು ದಿನಕ್ಕೆ 400 ರೂ.ಗಳ ರಾಷ್ಟ್ರೀಯ ಕನಿಷ್ಠ ವೇತನ, 25 ಲಕ್ಷ ರೂ.ಗಳ ಸಾರ್ವತ್ರಿಕ ಆರೋಗ್ಯ ರಕ್ಷಣೆ ಮತ್ತು ನಗರ ಪ್ರದೇಶಗಳಲ್ಲಿನ ಭಾರತೀಯ ಕಾರ್ಮಿಕರಿಗೆ ಉದ್ಯೋಗ ಖಾತರಿ ಕಾಯ್ದೆಯನ್ನು ಖಚಿತಪಡಿಸಬೇಕು ಎಂದಿರುವ ರಮೇಶ,ಆದರೆ ಈ ಸಂಹಿತೆಗಳು ನರೇಗಾ ಸೇರಿದಂತೆ ದಿನಕ್ಕೆ 400 ರೂ.ಗಳ ರಾಷ್ಟ್ರೀಯ ಕನಿಷ್ಠ ವೇತನ, 25 ಲಕ್ಷ ರೂಗಳ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಒದಗಿಸಲು ಆರೋಗ್ಯ ಹಕ್ಕು ಕಾನೂನು,ನಗರ ಪ್ರದೇಶಗಳಲ್ಲಿ ಉದ್ಯೋಗ ಖಾತರಿ ಕಾಯ್ದೆ,ಜೀವವಿಮೆ ಮತ್ತು ಅಪಘಾತ ವಿಮೆ ಸೇರಿದಂತೆ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆ ಹಾಗೂ ಪ್ರಮುಖ ಸರಕಾರಿ ಕಚೇರಿಗಳಲ್ಲಿ ಗುತ್ತಿಗೆಯಾಧಾರಿತ ಉದ್ಯೋಗ ಪದ್ಧತಿಗೆ ಅಂತ್ಯ;ಶ್ರಮಿಕ ನ್ಯಾಯವನ್ನು ವಾಸ್ತವವಾಗಿಸಲು ಕಾರ್ಮಿಕರ ಈ ಐದು ಅಗತ್ಯ ಬೇಡಿಕೆಗಳನ್ನು ಈಡೇರಿಸುತ್ತವೆಯೇ ಎಂದು ಪ್ರಶ್ನಿಸಿದ್ದಾರೆ.
ಕಷ್ಟ ಪಟ್ಟು ಪಡೆಯಲಾಗಿದ್ದ 29 ಕಾರ್ಮಿಕ ಕಾನೂನುಗಳು ಈವರೆಗೆ ಕಾರ್ಮಿಕರಿಗೆ ಸ್ವಲ್ಪ ಮಟ್ಟಿಗೆ ರಕ್ಷಣೆಯನ್ನು ನೀಡಿದ್ದವು,ಆದರೆ ನೂತನ ಕಾರ್ಮಿಕ ಸಂಹಿತೆಗಳು ಈ ಕಾನೂನುಗಳನ್ನು ರದ್ದುಗೊಳಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಸಿಪಿಎಂ, ಹಲವು ಮಿತಿಗಳ ಹೊರತಾಗಿಯೂ ಸೂಕ್ತ ವೇತನ,ಕೆಲಸದ ಸಮಯ,ಸಾಮಾಜಿಕ ಭದ್ರತೆ,ಕೈಗಾರಿಕಾ ಸುರಕ್ಷತೆ ಮತ್ತು ಕಾರ್ಮಿಕ ಸಂಘಟನೆಗಳು ಹಾಗೂ ಉದ್ಯೋಗದಾತರ ನಡುವೆ ಒಪ್ಪಂದಕ್ಕೆ ಅವಕಾಶ ಇವು ಸ್ವಲ್ಪ ಮಟ್ಟಿಗಾದರೂ ಅಸ್ತಿತ್ವದಲ್ಲಿದ್ದವು. ನೂತನ ಸಂಹಿತೆಗಳು ಸರಳೀಕರಣದ ಬದಲು ಅಸ್ತಿತ್ವದಲ್ಲಿರುವ ಹಕ್ಕುಗಳನ್ನು ದುರ್ಬಲಗೊಳಿಸಲು ಮತ್ತು ರದ್ದುಗೊಳಿಸಲು ಉದ್ದೇಶಿಸಿವೆ. ಅವು ಉದ್ಯೋಗದಾತರ ಪರವಾಗಿವೆ ಎಂದು ಹೇಳಿದೆ.
ನೂತನ ಕಾರ್ಮಿಕ ಸಂಹಿತೆಗಳು ಉದ್ಯೋಗಗಳು ಮತ್ತು ಹೂಡಿಕೆಯನ್ನು ಹೆಚ್ಚಿಸುತ್ತವೆ ಎಂಬ ಸರಕಾರದ ಹೇಳಿಕೆಯು ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದೂ ಸಿಪಿಎಂ ಪ್ರತಿಪಾದಿಸಿದೆ.







