ಇಂಡಿಗೋ ಅವ್ಯವಸ್ಥೆ | ಹೊಸ ಪೈಲಟ್ ರೋಸ್ಟರ್ ನಿಯಮಗಳು ಮಾತುಕತೆಗೆ ಒಳಪಡುವುದಿಲ್ಲ : ಸಚಿವ ರಾಮ್ ಮೋಹನ್ ನಾಯ್ಡು

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು (PTI)
ಹೊಸದಿಲ್ಲಿ: ಇಂಡಿಗೋ ಕಾರ್ಯಾಚರಣೆಗಳಲ್ಲಿ ಕಂಡುಬಂದಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಮಂಗಳವಾರ ಲೋಕಸಭೆಯಲ್ಲಿ ಸರ್ಕಾರದ ಕಠಿಣ ನಿಲುವು ಸ್ಪಷ್ಟಪಡಿಸಿದರು. ಪರಿಷ್ಕೃತ ಪೈಲಟ್–ಸಿಬ್ಬಂದಿ ರೋಸ್ಟರ್ ಮಾನದಂಡಗಳು ಯಾವುದೇ ರೀತಿಯ ಮಾತುಕತೆಗೆ ಒಳಪಡುವುದಿಲ್ಲ ಎಂದು ಅವರು ಹೇಳಿದರು.
“ಇಂಡಿಗೋ ಅಡಚಣೆಗಳು ನಿಧಾನವಾಗಿ ಸರಿಯಾಗುತ್ತಿವೆ. ಆದರೆ ಯಾವುದೇ ವಿಮಾನಯಾನ ಕಂಪೆನಿಯು ಅದು ಎಷ್ಟೇ ದೊಡ್ಡದಾಗಿರಲಿ, ಯೋಜನಾ ವೈಫಲ್ಯ ಅಥವಾ ನಿಯಮ ಉಲ್ಲಂಘನೆಯ ಮೂಲಕ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಲು ಅವಕಾಶವಿಲ್ಲ” ಎಂದು ಅವರು ವಿರೋಧ ಪಕ್ಷದ ಗದ್ದಲದ ನಡುವೆಯೇ ಸ್ಪಷ್ಟಪಡಿಸಿದರು.
ಇಂಡಿಗೋನಲ್ಲಿ ಅವ್ಯವಸ್ಥೆ ಎರಡನೇ ವಾರಕ್ಕೂ ವಿಸ್ತರಿಸಿರುವುದರಿಂದ ಮಂಗಳವಾರವೂ ಸುಮಾರು 500 ವಿಮಾನಗಳನ್ನು ರದ್ದುಗೊಳಿಸಲಾಯಿತು. ಕಳೆದ ವಾರಕ್ಕಿಂತ ಈ ಸಂಖ್ಯೆ ಕಡಿಮೆಯಾದರೂ, ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ತೊಂದರೆ ಮುಂದುವರಿದಿದೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮಧ್ಯಪ್ರವೇಶಿಸಿ, ಹೊಸ ವಿಮಾನ ಕರ್ತವ್ಯ ಸಮಯ ಮಿತಿ (FDTL) ನಿಯಮಗಳ ಅಡಿಯಲ್ಲಿ ಪೈಲಟ್ಗಳ ರಾತ್ರಿ ಕರ್ತವ್ಯಕ್ಕೆ ಸಂಬಂಧಿಸಿದ ಕಠಿಣ ನಿಬಂಧನೆಗಳಿಂದ ಇಂಡಿಗೋಗೆ ತಾತ್ಕಾಲಿಕ ವಿನಾಯಿತಿ ನೀಡಿತ್ತು. ಸಿಬ್ಬಂದಿ ಶಿಫ್ಟ್ ವ್ಯವಸ್ಥೆ ಮತ್ತು ಲಭ್ಯತೆ ಹಿನ್ನಲೆಯಲ್ಲಿ ಈ ರಿಯಾಯಿತಿ ನೀಡಲಾಗಿತ್ತು.
ಆದರೂ, ಈ ಕ್ರಮವು ತಜ್ಞರಿಂದ ಟೀಕೆಗೆ ಗುರಿಯಾಗಿದೆ. ದೇಶೀಯ ವಿಮಾನ ಸಂಚಾರದ ಮೂರರ ಎರಡರಷ್ಟನ್ನು ನಿಭಾಯಿಸುತ್ತಿರುವ ಇಂಡಿಗೋ ಒತ್ತಡಕ್ಕೆ ಸರ್ಕಾರ ಮಣಿದಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.







