20 ವರ್ಷಗಳಲ್ಲೇ ಹೊಸ ದಾಖಲೆ: 550 ಇಂಡಿಗೊ ವಿಮಾನ ಹಾರಾಟ ರದ್ದು!

PC: x.com/ndtv
ಹೊಸದಿಲ್ಲಿ: ಕಳೆದ ಇಪ್ಪತ್ತು ವರ್ಷಗಳ ಕಾರ್ಯಾಚರಣೆ ದಾಖಲೆಯಲ್ಲೇ ಮೊದಲ ಬಾರಿಗೆ ಗುರುವಾರ ಇಂಡಿಗೊ 550 ವಿಮಾನಗಳ ಕಾರ್ಯಾಚರಣೆಯನ್ನು ರದ್ದುಪಡಿಸಿದೆ. ಸಿಬ್ಬಂದಿ ಮತ್ತು ತಾಂತ್ರಿಕ ಸಮಸ್ಯೆಗಳಿಂದ ವಿಮಾನಯಾನ ಅಸ್ತವ್ಯಸ್ತಗೊಂಡಿದೆ. ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಪೂರ್ವಯೋಜಿತ ಸೇವಾ ರದ್ದತಿಯ ಮೂಲಕ ಕಾರ್ಯಾಚರಣೆ ಸಹಜ ಸ್ಥಿತಿಗೆ ತರಲು ಹೆಣಗಾಡುತ್ತಿದೆ.
ಮುಂದಿನ ಎರಡು ಮೂರು ದಿನಗಳಲ್ಲಿ ಮತ್ತಷ್ಟು ವಿಮಾನಗಳು ರದ್ದಾಗುವ ಸಾಧ್ಯತೆ ಇದೆ. ಪ್ರತಿದಿನ 2300 ವಿಮಾನಗಳ ಕಾರ್ಯಾಚರಣೆ ನಡೆಸುತ್ತಿರುವ ಸಂಸ್ಥೆ, ಸೇವೆಯ ಸಮಯ ಪಾಲನೆ ಹೆಗ್ಗುರುತು ಹೊಂದಿರುವ ಸಂಸ್ಥೆಯ ಸಕಾಲಿಕ ಸೇವೆ ಬುಧವಾರ ಶೇಕಡ 19.7ಕ್ಕೆ ಇಳಿದಿದೆ. ಮಂಗಳವಾರ ಇದು ಶೇಕಡ 35ರಷ್ಟಿತ್ತು.
ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಇಂಡಿಗೊ ಹಿರಿಯ ಅಧಿಕಾರಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಡಿಜಿಸಿಎ ಅಧಿಕಾರಿಗಳು ಭೇಟಿ ಮಾಡಿ ಚರ್ಚೆ ನಡೆಸಿದರು.
ಕಾರ್ಯಾಚರಣೆಯನ್ನು ಸಹಜ ಸ್ಥಿತಿಗೆ ತರುವುದು ಮತ್ತು ಸಮಯಪಾಲನೆಯನ್ನು ಮತ್ತೆ ಜಾರಿಗೊಳಿಸುವುದು ಸುಲಭ ಸಾಧ್ಯವಲ್ಲ ಎಂದು ಇಂಡಿಗೊ ಸಿಇಓ ಪೀಟರ್ ಎಲ್ಬರ್ಸ್ ಹೇಳಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ 118, ಬೆಂಗಳೂರಿನಲ್ಲಿ 100, ಹೈದರಾಬಾದ್ ನಲ್ಲಿ 75, ಕೊಲ್ಕತ್ತಾದಲ್ಲಿ 35, ಚೆನ್ನೈನಲ್ಲಿ 26, ಗೊವಾದಲ್ಲಿ 11 ವಿಮಾನಗಳ ಸೇವೆ ರದ್ದುಪಡಿಸಲಾಗಿದೆ. ಇತರ ವಿಮಾನ ನಿಲ್ದಾಣಗಳಲ್ಲೂ ಸೇವೆ ರದ್ದಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಹೊಸ ನಿಯಮಾವಳಿಯಡಿ ಸಿಬ್ಬಂದಿ ಅಗತ್ಯತೆಯನ್ನು ತಪ್ಪು ಅಂದಾಜು ಮಾಡಿರುವುದನ್ನು ಇಂಡಿಗೊ ಒಪ್ಪಿಕೊಂಡಿದ್ದು, ಚಳಿಗಾಲದ ವಾತಾವರಣ ಮತ್ತು ದಟ್ಟಣೆಯ ಕಾರಣದಿಂದ ಸಮರ್ಪಕ ಸಿಬ್ಬಂದಿ ಲಭ್ಯತೆ ಸಾಧ್ಯವಾಗುತ್ತಿಲ್ಲ.







