ದಿಲ್ಲಿ: ಶೋರೂಮ್ ನ ಮೊದಲ ಮಹಡಿಯಿಂದ ಕೆಳಗೆ ಬಿದ್ದ ಹೊಸ ಮಹೀಂದ್ರಾ ಥಾರ್

Photo credit: NDTV
ಹೊಸದಿಲ್ಲಿ : ಪೂರ್ವ ದಿಲ್ಲಿಯ ಪ್ರೀತ್ ವಿಹಾರ್ನಲ್ಲಿ ಹೊಸದಾಗಿ ಖರೀದಿಸಿದ ಮಹೀಂದ್ರಾ ಥಾರ್ ಸಾಂಪ್ರದಾಯಿಕ ಆಚರಣೆ ವೇಳೆ ಆಕಸ್ಮಿಕವಾಗಿ ಆಕ್ಸಿಲರೇಟರ್ ಒತ್ತಿದ್ದರಿಂದ ಮೊದಲ ಮಹಡಿಯಿಂದ ಕೆಳಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಗಾಝಿಯಾಬಾದ್ನ ಇಂದಿರಾಪುರಂ ನಿವಾಸಿಗಳಾದ ಪ್ರದೀಪ್ ಮತ್ತು ಪತ್ನಿ ಮಾನಿ ಪವಾರ್ ತಮ್ಮ ಥಾರ್ ಅನ್ನು ಪಡೆಯಲು ನಿರ್ಮಾಣ್ ವಿಹಾರ್ನಲ್ಲಿರುವ ಮಹೀಂದ್ರಾ ಶೋ ರೂಂಗೆ ಭೇಟಿ ನೀಡಿದಾಗ ಈ ಘಟನೆ ಸಂಭವಿಸಿದೆ.
ಕಾರನ್ನು ಶೋರೂಂನಿಂದ ಕೊಂಡೊಯ್ಯುವ ಮೊದಲು ಮಾನಿ ಟೈರ್ಗಳ ಕೆಳಗೆ ನಿಂಬೆಹಣ್ಣುಗಳನ್ನಿಟ್ಟು ಸಾಂಪ್ರದಾಯಿಕ ಆಚರಣೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಕಾರಿನ ಆಕ್ಸಿಲರೇಟರ್ ಒತ್ತಿದ್ದರಿಂದ ಕಾರು ಶೋರೂಂನ ಗಾಜನ್ನು ಒಡೆದು ಮೊದಲ ಮಹಡಿಯಿಂದ ಕೆಳಗಿನ ರಸ್ತೆಗೆ ಬಿದ್ದಿದೆ.
ಆ ಸಮಯದಲ್ಲಿ ಮಾನಿ, ಅವರ ಪತಿ ಪ್ರದೀಪ್ ಮತ್ತು ಶೋರೂಂ ಸಿಬ್ಬಂದಿ ವಿಕಾಸ್ ಕಾರಿನೊಳಗೆ ಇದ್ದರು ಎಂದು ಹೇಳಲಾಗಿದೆ. ವೀಡಿಯೊದಲ್ಲಿ ಪಲ್ಟಿಯಾದ ಥಾರ್ ಶೋರೂಂನ ಹೊರಗಿನ ರಸ್ತೆಯಲ್ಲಿ ಬಿದ್ದುಕೊಂಡಿರುವುದು ಕಂಡು ಬಂದಿದೆ.
ಈ ಅಪಘಾತದಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಯಾವುದೇ ದೂರು ಕೂಡ ದಾಖಲಾಗಿಲ್ಲ ಎಂದು ಹೇಳಲಾಗಿದೆ.







