ಹೊಸ ಕಟ್ಟಡದಲ್ಲಿ ಹೊಸ ತಂಡದಿಂದ ಕೇಂದ್ರ ಬಜೆಟ್ ಗೆ ಸಿದ್ಧತೆ!

ನಿರ್ಮಲಾ ಸೀತಾರಾಮನ್ (File Photo: PTI)
ಮೊತ್ತ ಮೊದಲ ಬಾರಿಗೆ ಬಜೆಟ್ ರೂಪಿಸುವಾಗ ನಿರ್ಮಲಾ ಸೀತಾರಾಮನ್ ನಿಯೋಜಿತ ಹಣಕಾಸು ಕಾರ್ಯದರ್ಶಿಯ ಹೊರತಾಗಿ ಕೆಲಸ ಮಾಡಲಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ಫೆಬ್ರವರಿ 1ರಂದು ತಮ್ಮ 9ನೇ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಈ ಬಜೆಟ್ ಹಿಂದೆಂದಿಗಿಂತಲೂ ವಿಶೇಷವಾಗಿರಲು ಹಲವು ಕಾರಣಗಳಿವೆ. ಈ ಬಾರಿ ಕೇಂದ್ರ ಬಜೆಟ್ ಹೊಸ ಕಟ್ಟಡ ಕರ್ತವ್ಯ ಭವನದಲ್ಲಿ ಸಿದ್ಧವಾಗಿದೆ. ಮಾತ್ರವಲ್ಲ, ಹೊಸ ತಂಡ ಬಜೆಟ್ ಸಿದ್ಧಪಡಿಸುತ್ತಿದೆ.
ಕರ್ತವ್ಯ ಭವನ ಇದೀಗ ಕೇಂದ್ರ ಸರ್ಕಾರದ ಕಾರ್ಯಕಾರಿಣಿಯ ಹೊಸ ಕೇಂದ್ರವಾಗಿದೆ. ಈ ಕೇಂದ್ರ ಹಲವು ವಿಚಾರಗಳಲ್ಲಿ ಹೊಸ ಸ್ಥಳವಾಗಿರುವುದು ನಿಜ. ಮುಖ್ಯವಾಗಿ ಈ ಕೇಂದ್ರದಲ್ಲಿ ನಿರ್ಮಲಾ ಸೀತಾರಾಮನ್ ಅವರಿಗೆ ಬಜೆಟ್ ಸಿದ್ಧಪಡಿಸುವಲ್ಲಿ ಹೊಸ ತಂಡ ನೆರವಾಗಲಿದೆ. ಹಾಗಿದ್ದರೆ ಹೊಸ ತಂಡದಲ್ಲಿ ಯಾರ್ಯಾರಿದ್ದಾರೆ?
ನಿರ್ಮಲಾ ಸೀತಾರಾಮನ್ ಅವರ ಎ ತಂಡದಲ್ಲಿ ಇದೀಗ ಹೊಸ ಕಾರ್ಯದರ್ಶಿಗಳು ನೇಮಕಗೊಂಡಿದ್ದಾರೆ. ಈ ತಂಡ ರಾಜಕೀಯವಾಗಿ ಮತ್ತು ಆರ್ಥಿಕವಾಗಿಯೂ ಬಹಳ ಮಹತ್ವಪೂರ್ಣ ಬಜೆಟ್ ಸಿದ್ಧಪಡಿಸುವ ಹೊಣೆಯನ್ನು ಹೊತ್ತಿದೆ. ವಸಾಹತು ಶಾಹಿ ಸಮಯದಿಂದ ಬಜೆಟ್ ಸಿದ್ಧವಾಗುತ್ತಿದ್ದ ನಾರ್ತ್ ಬ್ಲಾಕ್ಗೆ ಬದಲಾಗಿ ಮರುಅಭಿವೃದ್ಧಿಪಡಿಸಿದ ಸೆಂಟ್ರಲ್ ವಿಸ್ತಾದ ಕರ್ತವ್ಯ ಭವನದಿಂದ ಮಂಡಿಸಲಾಗುವ ಮೊದಲ ಬಜೆಟ್ ಹಲವು ಕಾರಣಗಳಿಂದ ಮಹತ್ವ ಪಡೆದಿದೆ.
ಸ್ಥಳ ಬದಲಾವಣೆಯ ಜೊತೆಗೆ ಹಣಕಾಸು ಸಚಿವಾಲಯದಲ್ಲೂ ಬದಲಾವಣೆಗಳಾಗಿವೆ. ಮೊತ್ತ ಮೊದಲ ಬಾರಿಗೆ ಬಜೆಟ್ ರೂಪಿಸುವಾಗ ನಿರ್ಮಲಾ ಸೀತಾರಾಮನ್ ನಿಯೋಜಿತ ಹಣಕಾಸು ಕಾರ್ಯದರ್ಶಿಯ ಹೊರತಾಗಿ ಕೆಲಸ ಮಾಡಲಿದ್ದಾರೆ. ಸಚಿವಾಲಯದಲ್ಲಿ ಇಂತಹ ಬದಲಾವಣೆ ಮೊತ್ತ ಮೊದಲ ಬಾರಿಗೆ ತರಲಾಗಿದೆ. ಬಜೆಟ್ ಸಿದ್ಧಪಡಿಸಲು ವಿವಿಧ ತಂಡಗಳ ಜೊತೆಗಿನ ಸಮನ್ವಯವನ್ನು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಹೊರಲಿದ್ದಾರೆ.
ಇನ್ನೊಂದು ಪ್ರಮುಖ ಬದಲಾವಣೆಯೆಂದರೆ ಬಜೆಟ್ ಸಿದ್ಧಪಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರ ಕೋರ್ ಸಮಿತಿ. ಈ ಸಮಿತಿಯಲ್ಲಿ ಅನುಭವಿ ತಲೆಗಳೂ ಇವೆ ಮತ್ತು ಹೊಸ ಮುಖಗಳೂ ಇವೆ.
ಆರ್ಥಿಕ ವ್ಯವಹಾರಗಳ ಮಹಿಳಾ ಕಾರ್ಯದರ್ಶಿ ಅನುರಾಧಾ ಠಾಕೂರ್ ಸಮನ್ವಯದ ಮುಖ್ಯ ಪಾತ್ರ ವಹಿಸಲಿದ್ದಾರೆ. ಸಿಬಿಡಿಟಿ (ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್) ಅಧ್ಯಕ್ಷ ರವಿ ಅಗರವಾಲ್. ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಎಂ ನಾಗರಾಜು, ಫಾರ್ಮಾಸ್ಯುಟಿಕಲ್ಸ್ ಕಾರ್ಯದರ್ಶಿ ಅರುಣಿಶ್ ಚಾವ್ಲ, ಹೊಸದಾಗಿ ನೇಮಕಗೊಂಡಿರುವ ಕಂದಾಯ ಕಾರ್ಯದರ್ಶಿ ಅರವಿಂದ್ ಶ್ರೀವಾಸ್ತವ ಮತ್ತು ಎಕ್ಸ್ಪೆಂಡಿಚರ್ (ವೆಚ್ಚವಹಿವಾಟು) ಕಾರ್ಯದರ್ಶಿಯಾಗಿ ವಿ ವಾಲ್ನಾಮ್ ಮತ್ತು ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್, ಹೊಸದಾಗಿ ನೇಮಕಗೊಂಡಿರುವ ಸಿಬಿಐಸಿ (ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸಸ್ ಆ್ಯಂಡ್ ಕಸ್ಟಮ್ಸ್) ಅಧ್ಯಕ್ಷ ವಿವೇಕ್ ಚತುರ್ವೇದಿ ತಂಡದಲ್ಲಿದ್ದಾರೆ.
ಸರ್ಕಾರ ತನ್ನ ಸುಧಾರಣೆಗಳ ಅಜೆಂಡಾವನ್ನು ಮುಂದುವರಿಸುವ ಸಾಧ್ಯತೆಯಿದೆ. ಮುಖ್ಯವಾಗಿ ಪ್ರಗತಿಯ ಮೇಲೆ ಗಮನಹರಿಸಿದ ಸುಧಾರಣೆಗಳು. ಇನ್ನು ಕೆಲವೇ ವಾರಗಳಲ್ಲಿ ಭಾರತದ ಮಧ್ಯಮವರ್ಗ, ಗ್ರಾಹಕರು, ಕೈಗಾರಿಕೆಗಳು ಮತ್ತು ಸಣ್ಣ ಮತ್ತು ಮಧ್ಯಮ ವರ್ಗದವರಿಗೆ ಬಜೆಟ್ನಲ್ಲಿ ಏನು ಮೀಸಲಿಡಲಾಗಿದೆ ಎಂದು ತಿಳಿದುಬರಲಿದೆ.







