10 ಕೋಟಿ ರೂ. ಹಗರಣದಲ್ಲಿ ದೋಷಿಗಳೆಂದು ಸಾಬೀತಾದ ಭಾರತೀಯ ಮೂಲದ ನ್ಯೂಝಿಲೆಂಡ್ ದಂಪತಿಗಳು
ಹಗರಣವೆಸಗಿದ ನಂತರ, ಬಿಸಿನೆಸ್ ಕ್ಲಾಸ್ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದ ಆರೋಪಿಗಳು

ಸಾಂದರ್ಭಿಕ ಚಿತ್ರ | PC : freepik.com
ಕ್ರೈಸ್ಟ್ ಚರ್ಚ್/ಹೊಸದಿಲ್ಲಿ: ನ್ಯೂಝಿಲೆಂಡ್ ನ ಮಕ್ಕಳ ಕಲ್ಯಾಣ ಸಂಸ್ಥೆಯಾದ ಟಮರಿಕಿಗೆ 2 ದಶಲಕ್ಷ ಡಾಲರ್ ಗೂ ಮೀರಿದ (10 ಕೋಟಿ ರೂ.) ನಷ್ಟವುಂಟು ಮಾಡಿದ ಆರೋಪಕ್ಕೆ ಗುರಿಯಾಗಿದ್ದ ಕ್ರೈಸ್ಟ್ ಚರ್ಚ್ ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ದಂಪತಿಗಳು ಈ ಹಗರಣದಲ್ಲಿ ಅಪರಾಧಿಗಳೆಂದು ಸಾಬೀತಾಗಿದ್ದಾರೆ.
ಈ ಪ್ರಕರಣದ ತನಿಖೆ ಅಕ್ಟೋಬರ್ 2022ರಿಂದ ನಡೆಯುತ್ತಿದ್ದರೂ, ಇತ್ತೀಚೆಗೆ ಓರ್ವ ಆರೋಪಿಯು ತನ್ನ ತಪ್ಪು ಒಪ್ಪಿಕೊಂಡ ನಂತರವಷ್ಟೇ ಈ ಪ್ರಕರಣದ ವಿವರಗಳು ಬೆಳಕಿಗೆ ಬಂದಿವೆ. ಈ ಹಗರಣವೆಸಗಿದ ನಂತರ, ಆರೋಪಿ ದಂಪತಿಗಳು 2023ರಲ್ಲಿ ಬಿಸಿನೆಸ್ ಕ್ಲಾಸ್ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದರು ಎಂಬ ಸಂಗತಿಯೂ ತನಿಖೆಯ ವೇಳೆ ಬಯಲಿಗೆ ಬಂದಿದೆ.
ಈ ಪ್ರಕರಣದ ಆರೋಪಿಗಳ ಪೈಕಿ ಒಬ್ಬರಾಗಿರುವ ಡಿವೈನ್ ಕನೆಕ್ಷನ್ ಲಿಮಿಟೆಡ್ ನ ನಿರ್ದೇಶಕ ಅಮನ್ ದೀಪ್ ಶರ್ಮ ಮೇ 16ರಂದು ನ್ಯಾಯಾಲಯದೆದುರು ತನ್ನ ತಪ್ಪು ಒಪ್ಪಿಕೊಂಡಿದ್ದು, ಜೂನ್ ತಿಂಗಳಲ್ಲಿ ಅವರಿಗೆ ಶಿಕ್ಷೆ ಘೋಷಣೆಯಾಗಲಿದೆ. ಇದಕ್ಕೂ ಮುನ್ನ, ಈ ಪ್ರಕರಣದ ಮತ್ತೋರ್ವ ಆರೋಪಿಯಾಗಿದ್ದ ಅಮನ್ ದೀಪ್ ಶರ್ಮರ ಪತ್ನಿ ಹಾಗೂ ನ್ಯೂಝಿಲೆಂಡ್ ಸರಕಾರದ ಮಕ್ಕಳ ಸಚಿವಾಲಯದ ಒರಾಂಗ ಟಮರಿಕಿ ಸಂಸ್ಥೆಯ ಮಾಜಿ ಆಸ್ತಿ ಮತ್ತು ಸೌಕರ್ಯಗಳ ವ್ಯವಸ್ಥಾಪಕಿಯಾಗಿದ್ದ ನೇಹಾ ಶರ್ಮ (36) ತನ್ನ ಮೇಲಿನ ವಂಚಕ ಮಾರ್ಗದ ಮೂಲಕ ಗಳಿಕೆ, ಅಕ್ರಮ ಹಣ ವರ್ಗಾವಣೆ ಹಾಗೂ ನಕಲಿ ದಾಖಲೆಗಳ ಬಳಕೆ ಆರೋಪಗಳನ್ನು ಒಪ್ಪಿಕೊಂಡಿದ್ದರಿಂದ, ನ್ಯಾಯಾಲಯ ಆಕೆಗೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು.
ಒರಾಂಗ ಟಮರಿಕಿಯಲ್ಲಿನ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದ ನೇಹಾ ಶರ್ಮ, ತಮ್ಮ ಪತಿಯು ಗೋಪ್ಯವಾಗಿ ನಡೆಸುತ್ತಿದ್ದ ಡಿವೈನ್ ಕನೆಕ್ಷನ್ ಲಿಮಿಟೆಡ್ ಗೆ ಹೆಚ್ಚುವರಿ ನಿರ್ವಹಣಾ ಕೆಲಸಗಳು ಹಾಗೂ ಡಿವೈನ್ ಕನೆಕ್ಷನ್ ಲಿಮಿಟೆಡ್ ಗೆ ನಕಲಿ ಇನ್ವಾಯ್ಸ್ ಗಳನ್ನು ಸೃಷ್ಟಿಸಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದರು.
ಆದರೆ, ಇವರಿಬ್ಬರ ಸಂಬಂಧದ ಬಗ್ಗೆ ನೇಹಾ ಶರ್ಮಾಳ ಸಹೋದ್ಯೋಗಿಗಳಿಗೆ ಅರಿವಿಲ್ಲದೆ ಇದ್ದುದರಿಂದ, ಈ ಹಗರಣ ಜುಲೈ 2021ರಿಂದ ಅಕ್ಟೋಬರ್ 2022ರವರೆಗೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಜರುಗಿತ್ತು ಎಂದು ಹೇಳಲಾಗಿದೆ.
ಸದ್ಯ ನೇಹಾ ಶರ್ಮಳನ್ನು ಆಕೆಯ ಪುಟ್ಟ ಮಗುವಿನೊಂದಿಗೆ ವಿಶೇಷ ಘಟಕದಲ್ಲಿರಿಸಲಾಗಿದ್ದು, ಈ ದಂಪತಿಗಳ ಹಿರಿಯ ಮಗುವನ್ನು ಅಮನ್ ದೀಪ್ ರ ಸಹೋದರಿಯೊಂದಿಗೆ ಭಾರತಕ್ಕೆ ವಾಪಸು ಕಳಿಸಲಾಗಿದೆ.
ನನ್ನ ಕೃತ್ಯವು ಅಪ್ರಬುದ್ಧತೆಯಿಂದ ಜರುಗಿತ್ತು ಎಂದು ಆಕೆ ತನ್ನ ವಕೀಲರ ಮೂಲಕ ನ್ಯಾಯಾಲಯದೆದುರು ವಾದ ಮಂಡಿಸಿದ್ದಳಾದರೂ, ಆಕೆಯಿಂದ ತನ್ನ ಕೃತ್ಯದ ಕುರಿತು ಯಾವುದೇ ಪಶ್ಚಾತ್ತಾಪವಾಗಲಿ ಅಥವಾ ಮರು ಪಾವತಿಯ ಪ್ರಸ್ತಾವನೆಯಾಗಲಿ ಕೇಳಿ ಬಂದಿಲ್ಲ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.







