ನಿಥಾರಿ ಪ್ರಕರಣದಲ್ಲಿ ಅಗತ್ಯವಾದರೆ ಉ.ಪ್ರ.ಸರಕಾರ ಸುಪ್ರೀಂ ಕೋರ್ಟ್ಗೆ ಹೋಗಲಿದೆ : ಡಿಸಿಎಂ ಮೌರ್ಯ

Photo: twitter/kpmaurya
ಲಕ್ನೋ: ಉ.ಪ್ರದೇಶ ಸರಕಾರವು ನಿಥಾರಿ ಸರಣಿ ಹತ್ಯೆಗಳ ಪ್ರಕರಣದಲ್ಲಿ ಅಲಹಾಬಾದ್ ಉಚ್ಛ ನ್ಯಾಯಾಲಯದ ತೀರ್ಪನ್ನು ಪುನರ್ಪರಿಶೀಲಿಸಲಿದೆ ಮತ್ತು ಅಗತ್ಯವಾದರೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಲನ್ನೇರಲಿದೆ ಎಂದು ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಅವರು ತಿಳಿಸಿದ್ದಾರೆ.
ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ್ದ 2005-06ರ ನಿಥಾರಿ ಪ್ರಕರಣದಲ್ಲಿ ಮರಣದಂಡನೆಯನ್ನು ಎದುರಿಸುತ್ತಿದ್ದ ಮಣಿಂದರ್ ಸಿಂಗ್ ಪಂಧೇರ್ ಮತ್ತು ಮನೆಗೆಲಸದಾಳು ಸುರೇಂದ್ರ ಕೋಲಿ ಅವರನ್ನು ಸೋಮವಾರ ಖುಲಾಸೆಗೊಳಿಸಿದ್ದ ಉಚ್ಛ ನ್ಯಾಯಾಲಯವು, ಆರೋಪವನ್ನು ನಿಸ್ಸಂಶಯವಾಗಿ ಸಾಬೀತುಗೊಳಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲಗೊಂಡಿದೆ ಮತ್ತು ತನಿಖೆಯು ಸರಿಯಾಗಿ ನಡೆದಿರಲಿಲ್ಲ ಎಂದು ತನ್ನ ತೀರ್ಪಿನಲ್ಲಿ ಹೇಳಿತ್ತು.
ದಿಲ್ಲಿ ಸಮೀಪದ ನೊಯ್ಡಾದಲ್ಲಿ ಪಂಧೇರ್ ಬಂಗಲೆಯ ಹಿಂದೆ ಹಲವಾರು ಅಸ್ಥಿಪಂಜರಗಳು ಪತ್ತೆಯಾಗುವುದರೊಂದಿಗೆ ಎಳೆಯ ಮಕ್ಕಳ ಸರಣಿ ಹತ್ಯೆಗಳು ಬೆಳಕಿಗೆ ಬಂದಿದ್ದವು. ಪ್ರಕರಣದ ತೀರ್ಪಿನಿಂದ ತಮಗೆ ನ್ಯಾಯ ಸಿಕ್ಕಿಲ್ಲ ಎಂದು ಸಂತ್ರಸ್ತ ಕುಟುಂಬಗಳು ಪ್ರತಿಪಾದಿಸಿವೆ.
ಗುರುವಾರ ಗೌತಮ ಬುದ್ಧ ನಗರಕ್ಕೆ ಭೇಟಿ ನೀಡಿದ್ದ ಮೌರ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಈ ಪ್ರಕರಣದಲ್ಲಿ ಮಾಡಬೇಕಿದ್ದನ್ನು ಸರಕಾರವು ಖಂಡಿತವಾಗಿಯೂ ಮಾಡಿದೆ. ತೀರ್ಪನ್ನು ಪುನರ್ಪರಿಶೀಲಿಸಲಾಗುವುದು ಮತ್ತು ಅಗತ್ಯವಾದರೆ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಉಚ್ಚ ನ್ಯಾಯಾಲಯವು ಕೋಲಿಗೆ 12 ಪ್ರಕರಣಗಳಲ್ಲಿ ಮತ್ತು ಪಂಧೇರ್ಗೆ ಎರಡು ಪ್ರಕರಣಗಳಲಿ ವಿಧಿಸಲಾಗಿದ್ದ ಮರಣದಂಡನೆಯನ್ನು ರದ್ದುಗೊಳಿಸಿದೆ. ಇಬ್ಬರ ಮೇಲೂ ಅತ್ಯಾಚಾರ ಮತ್ತು ಕೊಲೆ ಆರೋಪಗಳನ್ನು ಹೊರಿಸಲಾಗಿತ್ತು. ಗಾಜಿಯಾಬಾದ್ ಜೈಲಿನಲ್ಲಿರುವ ಕೋಲಿ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದರೆ ಉಚ್ಚ ನ್ಯಾಯಾಲಯದ ಆದೇಶದ ಬಳಿಕ ಪಂಧೇರ್ ಶೀಘ್ರವೇ ಜೈಲಿನಿಂದ ಹೊರಬರಬಹುದು.
ಅತ್ತ ನೊಯ್ಡಾದಲ್ಲಿ ತೀರ್ಪಿನ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದ ಬಲಿಪಶುಗಳ ಕುಟುಂಬ ಸದಸ್ಯರು,ಹಂತಕರನ್ನು ಗಲ್ಲಿಗೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಆಗ್ರಹಿಸಿದ್ದಾರೆ.







