ಸಿಬಿಐ ತನಿಖೆಗೆ ಆದೇಶಿಸಿದ್ದಕ್ಕೆ ಮಹುವಾ ಮೊಯಿತ್ರಾ ಆಕ್ರೋಶ
ಪ್ರಶ್ನೆ ಕೇಳಲು ಲಂಚ ಪಡೆದ ಆರೋಪ
ಮಹುವಾ ಮೊಯಿತ್ರಾ Photo- PTI
ಹೊಸದಿಲ್ಲಿ : ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಲೋಕಪಾಲ್ ಸಿಬಿಐ ತನಿಖೆಗೆ ಆದೇಶಿಸಿರುವ ಬಗ್ಗೆ, ಸಂಸದೆ ಕಿಡಿ ಕಾರಿದ್ದಾರೆ.
ಈ ಬಗ್ಗೆ x ನಲ್ಲಿ ಬರೆದುಕೊಂಡಿರುವ ಸಂಸದೆ “ನಿರ್ಭೀತಿಯಿಂದ ಚೆಂಡನ್ನು ಒದೆಯುವುದು ನಾವು ಮಾಡುವ ಉತ್ತಮ ಕೆಲಸ“ ಎಂದು ಸಿಬಿಐ ತನಿಖೆಗೆ ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ.
“ ನನಗೆ ಕರೆ ಮಾಡುವ ಮಾಧ್ಯಮಗಳಿಗೆ ನನ್ನ ಉತ್ತರ 13,000 ಕೋಟಿ ರೂ. ಅದಾನಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮೊದಲು ಎಫ್ ಐ ಆರ್ ದಾಖಲಿಸಬೇಕು. ಎಫ್ ಪಿ ಐ ಮಾಲೀಕತ್ವ ಹೊಂದಿರುವ ಅದಾನಿ ಸಂಸ್ಥೆಗಳಿಗೆ ಭಾರತೀಯ ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ಖರೀದಿಸಲು ಕೇಂದ್ರ ಗೃಹ ಇಲಾಖೆಯ ಕ್ಲಿಯರೆನ್ಸ್ ಹೇಗೆ ಸಿಗುತ್ತಿದೆ ಎನ್ನುವುದು ರಾಷ್ಟ್ರೀಯ ಭದ್ರತಾ ಸಮಸ್ಯೆಯಾಗಿದೆ. ಮೊದಲು ಅದರ ಬಗ್ಗೆ ತನಿಖೆ ನಡೆಯಲಿ. ಬಳಿಕ ನನ್ನ ಬೂಟುಗಳನ್ನು ಎಣಿಸಲು ಸಿಬಿಐಗೆ ಸ್ವಾಗತ” ಎಂದು ಟೀಕಿಸಿದ್ದಾರೆ.
ಲೋಕಪಾಲ್ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ ಹೇಳಿದ್ದಾರೆ. ‘ತನ್ನ ದೂರಿನ ಆಧಾರದ ಮೇಲೆ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಆರೋಪಿ ಸಂಸದೆ ಮಹುವಾ ಮೊಯಿತ್ರಾ ಅವರ ಭ್ರಷ್ಟಾಚಾರದ ಬಗ್ಗೆ ಇಂದು ಲೋಕಪಾಲ್ ಸಿಬಿಐ ತನಿಖೆಗೆ ಆದೇಶಿಸಿದೆ’ ಎಂದು ನಿಶಿಕಾಂತ್ ದುಬೆ x ನಲ್ಲಿ ಬರೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಲೋಕಸಭೆಯ ನೈತಿಕ ಸಮಿತಿಯ ಮುಂದೆ ಮೊಯಿತ್ರಾ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಉದ್ಯಮಿ ದರ್ಶನ್ ಹಿರಾನಂದನಿ ಅವರೊಂದಿಗೆ ಸಂಸತ್ತಿನ ಲಾಗಿನ್ ವಿವರಗಳನ್ನು ಹಂಚಿಕೊಳ್ಳುವಾಗ ತಾನು ಯಾವುದೇ ಸಂಸದೀಯ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಮೊಯಿತ್ರಾ ಸಮಿತಿಗೆ ಹೇಳಿದ್ದರು.
ಸಂಸತ್ತಿನಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ ವಿರುದ್ಧ ಪ್ರಶ್ನೆಗಳನ್ನು ಕೇಳುವುದಕ್ಕೆ ಬದಲಾಗಿ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಹಣಕಾಸು ಮತ್ತು ಉಡುಗೊರೆಗಳನ್ನು ಮೊಯಿತ್ರಾ ಲಂಚ ರೂಪದಲ್ಲಿ ಪಡೆದಿದ್ದಾರೆ ಎಂದು ಬಿಜೆಪಿ ಸಂಸದ ದುಬೆ ಆರೋಪಿಸಿದ್ದರು.
ಆದರೆ ಬಗ್ಗೆ ಪ್ರತಿಕ್ರಿಯಿಸಿದ ಟಿಎಂಸಿ ಸಂಸದೆ ಲಂಚದ ಆರೋಪವನ್ನು ನಿರಾಕರಿಸಿದ್ದರು. ಆದರೆ ಸಂಸತ್ತಿನ ಲಾಗಿನ್ ಮತ್ತು ಪಾಸ್ವರ್ಡ್ ವಿವರಗಳನ್ನು ಸ್ನೇಹಿತ, ಉದ್ಯಮಿ ದರ್ಶನ್ ಹಿರಾನಂದ್ ಗೆ ನೀಡಿದ್ದಾಗಿ ಒಪ್ಪಿಕೊಂಡಿದ್ದರು.