ಪ್ರಧಾನಿ ಮೋದಿ ನನ್ನ ಹೇಳಿಕೆಯನ್ನು ತಿರುಚಿ ವೈಭವೀಕರಿಸಿದ್ದಾರೆ
ಸನಾತನ ಧರ್ಮ ವಿವಾದದ ಬಗ್ಗೆ ಉದಯನಿಧಿ ಸ್ಟಾಲಿನ್
ಉದಯನಿಧಿ ಸ್ಟಾಲಿನ್ | Photo: PTI
ಚೆನ್ನೈ : ‘ಸನಾತನ ಧರ್ಮ’ದ ಬಗ್ಗೆ ನಾನು ನೀಡಿರುವ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷ ತಿರುಚುತ್ತಿದೆ ಮತ್ತು ವೈಭವೀಕರಿಸುತ್ತಿದೆ ಎಂದು ಡಿಎಂಕೆ ನಾಯಕ ಹಾಗೂ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಆರೋಪಿಸಿದ್ದಾರೆ.
‘‘ಸನಾತನ ಧರ್ಮವು ಸೊಳ್ಳೆ, ಡೆಂಗಿ, ಮಲೇರಿಯ, ಜ್ವರ ಮತ್ತು ಕೊರೋನ ಇದ್ದಂತೆ, ಅದನ್ನು ನಾಶಪಡಿಸಬೇಕು’’ ಎಂಬುದಾಗಿ ತಿಂಗಳುಗಳ ಹಿಂದೆ ಉದಯನಿಧಿ ಸ್ಟಾಲಿನ್ ಸಭೆಯೊಂದರಲ್ಲಿ ಮಾತನಾಡುತ್ತಾ ಹೇಳಿದ್ದರು.
ರವಿವಾರ ಕರೂರ್ ಜಿಲ್ಲೆಯಲ್ಲಿ ಪಕ್ಷದ ಯುವ ಘಟಕದ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಉದಯನಿಧಿ, ತಾನು ಹಿಂದೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಮಧ್ಯಪ್ರದೇಶದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ನನ್ನ ಹೇಳಿಕೆಗಳಿಗೆ ತಪ್ಪು ವ್ಯಾಖ್ಯಾನ ನೀಡಿದ್ದಾರೆ ಎಂದು ಆರೋಪಿಸಿದ ಅವರು, ‘‘ನಾನು ಜನಾಂಗೀಯ ಹತ್ಯೆಗೆ ಕರೆ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ. ಆದರೆ, ನಾನು ಹೇಳದ ಸಂಗತಿಗಳನ್ನು ಅವರು ಹೇಳಿದ್ದಾರೆ. ನಾನು ಒಂದು ಸಭೆಗೆ ಹಾಜರಾಗಿ ಮೂರು ನಿಮಿಷ ಮಾತನಾಡಿದೆ. ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣಬೇಕು ಎಂದು ನಾನು ಹೇಳಿದೆ. ಸಾಧ್ಯವಾಗದಿದ್ದರೆ ಆ ತಾರತಮ್ಯ ವ್ಯವಸ್ಥೆಯನ್ನೇ ಇಲ್ಲವಾಗಿಸಬೇಕು ಎಂದು ಹೇಳಿದ್ದೆ. ಆದರೆ ಅವರು ಅದನ್ನು ತಿರುಚಿದ್ದಾರೆ, ವೈಭವೀಕರಿಸಿದ್ದಾರೆ ಮತ್ತು ಇಡೀ ಭಾರತವೇ ನನ್ನ ಬಗ್ಗೆ ಮಾತನಾಡುವಂತೆ ಮಾಡಿದ್ದಾರೆ’’ ಎಂದು ಉದಯನಿಧಿ ಹೇಳಿದರು.
ತಾನು ಎದುರಿಸಿದ ಅಗಾಧ ಆಕ್ರೋಶದ ಬಗ್ಗೆ ಮಾತನಾಡಿದ ಅವರು, ‘‘ಒಬ್ಬ ದೇವಮಾನವ ನನ್ನ ತಲೆಗೆ 5-10 ಕೋಟಿ ರೂ. ಬಹುಮಾನ ಘೋಷಿಸಿದ. ಈಗ ಆ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ. ನನಗೆ ನ್ಯಾಯಾಲಯದಲ್ಲಿ ನಂಬಿಕೆಯಿದೆ. ನನ್ನ ಹೇಳಿಕೆಗಳಿಗೆ ಕ್ಷಮೆ ಯಾಚಿಸುವಂತೆ ನನಗೆ ಹೇಳಲಾಯಿತು. ಆದರೆ, ನಾನು ಕ್ಷಮೆಯಾಚಿಸಲಾರೆ ಎಂದು ಹೇಳಿದೆ. ನಾನು ಸ್ಟಾಲಿನ್ರ ಮಗ, ಕಲೈನಾರ್ರ ಮೊಮ್ಮಗ ಹಾಗೂ ನಾನು ಅವರ ಸಿದ್ಧಾಂತವನ್ನಷ್ಟೇ ಉಲ್ಲೇಖಿಸಿದ್ದೇನೆ ಎಂದು ಹೇಳಿದೆ’’ ಎಂದರು.
‘‘ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಹಾಗಾಗಿ ಅದನ್ನು ಅಳಿಸಿ ಹಾಕಬೇಕಾಗಿದೆ’’ ಎಂದು ಸೆಪ್ಟಂಬರ್ನಲ್ಲಿ ಉದಯನಿಧಿ ಸ್ಟಾಲಿನ್ ಕರೆ ನೀಡಿದ್ದರು.
ಆ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿಯು ದೇಶವ್ಯಾಪಿ ಪ್ರತಿಭಟನೆ ನಡೆಸಿತ್ತು. ಉದಯನಿಧಿಯ ಹೇಳಿಕೆಗಳು ಯಹೂದಿಗಳ ಬಗ್ಗೆ ಹಿಟ್ಲರ್ ಹೊಂದಿದ್ದ ನಿಲುವಿನಂತೆಯೇ ಇದೆ ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದರು.